ಡೊನಾಲ್ಡ್ ಟ್ರಂಪ್ ಗೆಲುವಿಗಾಗಿ ದೆಹಲಿಯಲ್ಲಿ ಹಿಂದೂ ಸೇನೆ ವಿಶೇಷ ಪೂಜೆ
ನವದೆಹಲಿ, ನವೆಂಬರ್ 3: ಅಮೆರಿಕ ಚುನಾವಣೆಯ ಫಲಿತಾಂಶ ಹೊರಬರಲು ಕೆಲವು ಗಂಟೆಗಳು ಬಾಕಿ ಇರುವಾಗ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಕಷ್ಟ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ನಡುವೆ ದೆಹಲಿಯಲ್ಲಿನ ಟ್ರಂಪ್ ಬೆಂಬಲಿಗರು ಅವರ ಸುಗಮ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಹಿಂದೂ ಸೇನಾ ಸಂಘಟನೆಯ ಸದಸ್ಯರು ಮತ್ತು ಡೊನಾಲ್ಡ್ ಟ್ರಂಪ್ ಬೆಂಬಲಿಗರು ದೆಹಲಿಯ ದೇವಸ್ಥಾನದಲ್ಲಿ ಟ್ರಂಪ್ ಗೆಲುವಿಗಾಗಿ ಮಂಗಳವಾರ ಪೂಜೆ ಸಲ್ಲಿಸಿದರು. ಪೂರ್ವ ದೆಹಲಿಯಲ್ಲಿನ ದೇವಸ್ಥಾನವೊಂದರಲ್ಲಿ ಅರ್ಚಕರ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.
ಸುಮಾರು 30 ನಿಮಿಷಗಳ ಕಾಲ ಹಿಂದೂ ಸಂಪ್ರದಾಯಗಳಿಗೆ ಅನುಗುಣವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಹಿಂದೂ ಸೇನಾ, ಡೊನಾಲ್ಡ್ ಟ್ರಂಪ್ ಅವರಿಗೆ ಆಶೀರ್ವಾದ ನೀಡುವಂತೆ ದೇವರನ್ನು ಕೋರಿದರು. ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಟ್ರಂಪ್ ಹೆಸರಿನಲ್ಲಿ ಅರ್ಚನೆ ಮಾಡಲಾಯಿತು. ಡೊನಾಲ್ಡ್ ಟ್ರಂಪ್ ಅವರು ಇಸ್ಲಾಂ ಉಗ್ರವಾದದ ವಿರುದ್ಧ ಧ್ವನಿ ಎತ್ತಿದ್ದಾರೆ. ಹೀಗಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾಗತಿಕ ಸಮುದಾಯ ಅವರನ್ನು ಬೆಂಬಲಿಸಬೇಕಿದೆ ಎಂದು ಪೂಜೆ ನೆರವೇರಿಸಿದ ಅರ್ಚಕ ವೇದ್ ಶಾಸ್ತ್ರಿ ತಿಳಿಸಿದರು.

'ಕಳೆದ ಚುನಾವಣೆಯಲ್ಲಿಯೂ ನಾವು ಟ್ರಂಪ್ ಅವರ ಗೆಲುವಿಗಾಗಿ ಪ್ರಾರ್ಥಿಸಿದ್ದೆವು. ಈ ಬಾರಿ ಕೂಡ ಅವರ ಗೆಲುವಿಗಾಗಿ ನಾವು ದೇವರ ಆಶೀರ್ವಾದ ಕೋರಿದ್ದೇವೆ. ಅವರ ಗೆಲುವು ಜಗತ್ತಿಗೆ ಮಾತ್ರ ಗೆಲುವಲ್ಲ, ಭಾರತಕ್ಕೂ ಕೂಡ. ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಅಮೆರಕವು ನಮಗೆ ಉತ್ತಮ ಮಿತ್ರ ದೇಶವಾಗಿದೆ' ಎಂದು ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತ ಹೇಳಿದರು.












Click it and Unblock the Notifications