ಯುಪಿಎಸ್‌ಸಿ : ನಾಲ್ಕೂವರೆ ಅಡಿಯ ಇರಾಳ ಎತ್ತರದ ಸಾಧನೆ
ನವದೆಹಲಿ, ಜು. 04 : ಆಕೆಯ ಎತ್ತರ ಬರೀ ನಾಲ್ಕೂವರೆ ಅಡಿ ಇರಬಹುದು. ಆಕೆಯಲ್ಲಿರುವ ಊನತೆಯಿಂದಾಗಿ ಆಕೆಗೆ ಉನ್ನತ ಸ್ಥಾನ ಸಿಗದಂತಾಗಿರಬಹುದು. ಇದರಿಂದ ಎದೆಗುಂದದ ದೆಹಲಿಯ ಈ ಕುಬ್ಜ ಮಹಿಳೆ ತನಗೆ ಸಿಗಬೇಕಾಗಿದ್ದ ಸ್ಥಾನಮಾನಕ್ಕೆ ಕಾನೂನು ಹೋರಾಟ ಮಾಡಿ ಗೆದ್ದಿದ್ದಲ್ಲದೆ, ಇಂದು ಇಡೀ ಭಾರತವೇ ತನ್ನತ್ತ ತಿರುಗಿ ನೋಡುವಂಥ ಎತ್ತರದ ಸಾಧನೆ ಮಾಡಿದ್ದಾಳೆ.
ಆಕೆ ಇರಾ ಸಿಂಘಾಲ್ (29). ಶನಿವಾರ ಕೇಂದ್ರ ಲೋಕಸೇವಾ ಆಯೋಗ ಪ್ರಕಟಿಸಿದ ಫಲಿತಾಂಶದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಹಿಂದೆ 2010ರಲ್ಲಿ ಕೂಡ ಅವರು ಯುಪಿಎಸ್‌ಸಿ ಪರೀಕ್ಷೆ ಬರೆದು 813ನೇ ಸ್ಥಾನ ಪಡೆದಿದ್ದರು. ಆದರೆ, ಬೆನ್ನುಮೂಳೆಯಲ್ಲಿರುವ ತೊಂದರೆಯಿಂದಾಗಿ ಕೈತಿರುಚಲು ಬಾರದ್ದರಿಂದ ಆಕೆಗೆ ಬೇಕಾದ ಪೋಸ್ಟಿಂಗ್ ದಕ್ಕಿರಲಿಲ್ಲ.
ಈ ತಾರತಮ್ಯದ ವಿರುದ್ಧ ಕಾನೂನು ಹೋರಾಟ ನಡೆಸಿದ ಇರಾ ಸಿಂಘಾಲ್ ಕೇಸನ್ನು ಗೆದ್ದು ತಮಗೆ ದಕ್ಕಬೇಕಾದ ಸ್ಥಾನವನ್ನು ದಕ್ಕಿಸಿಕೊಂಡರು. ತಮ್ಮ ಕೈತಿರುಗಿಸಲು ಬಾರದಿದ್ದರೇನಂತೆ, 2014ರಲ್ಲಿ ಮತ್ತೊಮ್ಮೆ ಐಎಎಸ್ ಪರೀಕ್ಷೆ ಕಟ್ಟಿ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂಥ ಸಾಧನೆಯನ್ನು ಇರಾ ಮೆರೆದಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. [ಯುಪಿಎಸ್ಸಿ ಫಲಿತಾಂಶ : ಕರ್ನಾಟಕದಿಂದ 56 ಜನ ಆಯ್ಕೆ]

ನಮ್ಮ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಾಗುವಂತೆ ಮಹಿಳಾಮಣಿಗಳು ಯುಪಿಎಸ್ಸಿಯಲ್ಲಿಯೂ ಅತ್ಯುದ್ಭುತ ಸಾಧನೆ ಮೆರೆದಿದ್ದಾರೆ. ಮೊದಲ ಐದು ಶ್ರೇಯಾಂಕಗಳಲ್ಲಿ ನಾಲ್ವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇರಾ ಸಿಂಘಾಲ್ ಮೊದಲನೆಯವರಾದರೆ, ರೇಣು ರಾಜ್, ನಿಧಿ ಗುಪ್ತಾ, ವಂದನಾ ರಾವ್ ಮೊದಲ ನಾಲ್ಕು ಸ್ಥಾನ ಪಡೆದಿದ್ದಾರೆ.
"ನನಗೆ ಇದನ್ನು ನಂಬುವುದಕ್ಕೇ ಆಗುತ್ತಿಲ್ಲ. ನನಗೆ ತುಂಬಾ ಸಂತೋಷವಾಗಿದೆ. ಕನಿಷ್ಠ ಇನ್ನು ಮುಂದಾದರೂ ಜನರು ಮಹಿಳೆಯರನ್ನು, ಅದರಲ್ಲೂ ಅಂಗವಿಕಲ ಹೆಣ್ಣುಮಕ್ಕಳನ್ನು ಗೌರವದಿಂದ ನೋಡುತ್ತಾರೆ" ಎಂದು ನಾಲ್ಕನೇ ಪ್ರಯತ್ನದಲ್ಲಿ ಮೊದಲ ಸ್ಥಾನ ಪಡೆದಿರುವ ಇರಾ ಸಿಂಘಾಲ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. [ಕೆಪಿಎಸ್‌ಸಿ ನೇಮಕಾತಿ, ಆನ್‌ಲೈನ್‌ನಲ್ಲಿ ಅರ್ಜಿ ಲಭ್ಯ]
ಇರಾ ಸಿಂಘಾಲ್ ಅವರು ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಕಂದಾಯ ಸಚಿವಾಲಯ, ಯುಪಿಎಸ್‌ಸಿ, ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಇಲಾಖೆಗಳ ವಿರುದ್ಧ ನಾಲ್ಕು ವರ್ಷಗಳ ಹೋರಾಟ ನಡೆಸಿದ್ದ ಇರಾ ಕಡೆಗೂ ಜಯ ತಮ್ಮದಾಗಿಸಿಕೊಂಡರು. ಈಬಾರಿಯಾದರೂ ತನ್ನ ಮಗಳಿಗೆ ಬಯಸಿದಂಥ ಇಲಾಖೆಯಲ್ಲಿ ಕೆಲಸ ಸಿಗುತ್ತದೆ ಎಂದು ಇರಾ ತಂದೆ ಸಿಂಘಾಲ್ ಮಾತಿನಲ್ಲೂ ನೋವು ಇಣುಕುತ್ತದೆ.












Click it and Unblock the Notifications