ಫೆ.10, 11ರಂದು ಬ್ಯಾಂಕ್ ನೌಕರರ ಮುಷ್ಕರ
ನವದೆಹಲಿ, ಫೆ.7 : ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ಸಾರ್ವಜನಿಕ ವಲಯದ ಬ್ಯಾಂಕುಗಳ ನೌಕರರು ಎರಡು ದಿನಗಳ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಫೆ.10 ಮತ್ತು 11 ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಯಲಿದೆ.
ವೇತನ ಪರಿಷ್ಕರಣೆ ಬೇಡಿಕೆಯನ್ನು ಈಡೇರಿಸುವ ವಿಚಾರದಲ್ಲಿ ನೌಕರರ ಒಕ್ಕೂಟ ಹಾಗೂ ಆಡಳಿತ ಮಂಡಳಿ ನಡುವೆ ಸಂಧಾನ ಏರ್ಪಡದ ಹಿನ್ನೆಲೆಯಲ್ಲಿ ಮುಷ್ಕರ ನಿರ್ಧಾರ ಕೈಗೊಂಡಿರುವುದಾಗಿ ಬ್ಯಾಂಕ್ ನೌಕರರ ಒಕ್ಕೂಟ ಹೇಳಿದೆ.

2013ರ ಡಿ.14ರಂದು ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಭೆ ನಡೆಸಿದ್ದವು. ಆದರೆ, ಆ ಸಭೆ ವಿಫಲವಾದ ಹಿನ್ನಲೆಯಲ್ಲಿ ಡಿ.18ರಂದು ಬ್ಯಾಂಕ್ ನೌಕರರು ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ್ದರು. ಆದರೂ ವೇತನ ಪರಿಷ್ಕರಣೆ ಆಗದ ಹಿನ್ನಲೆಯಲ್ಲಿ ಎರಡು ದಿನದ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. [ದೇಶವ್ಯಾಪಿ ಬ್ಯಾಂಕ್ ಮುಷ್ಕರ]
2012ರಿಂದಲೂ ನೌಕರರ ಮುಷ್ಕರ ಹೆಚ್ಚಳವಾಗಿಲ್ಲ ಎಂದು ನೌಕರರ ಒಕ್ಕೂಟ ಹೇಳಿದೆ. ದೇಶಾದ್ಯಂತ ಒಟ್ಟು 27 ಸಾರ್ವಜನಿಕ ವಲಯದ ಬ್ಯಾಂಕುಗಳಿದ್ದು, ಇಲ್ಲಿ 8 ಲಕ್ಷ ಮಂದಿ ನೌಕರರಿದ್ದಾರೆ. ಈ ಬ್ಯಾಂಕುಗಳ 50 ಸಾವಿರ ಶಾಖೆಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ.
ಫೆ.13ರಂದು ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟ ನಡುವೆ ಸಭೆ ನಡೆಯಲಿದ್ದು, ಅಂದು ವೇತನ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯಲ್ಲಿ ವೇತನ ಹೆಚ್ಚಳದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications