ವಕೀಲೆ ಮೇಲೆ ಜಡ್ಜ್ ಲೈಂಗಿಕ ಕಿರುಕುಳ ತನಿಖೆಗೆ
ನವದೆಹಲಿ, ನ.12; ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ವಿರುದ್ಧವೇ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮಂಗಳವಾರ ಸುಪ್ರೀಂ ಕೋರ್ಟಿನಲ್ಲಿ ಮತ್ತೆ ಪ್ರತಿಧ್ವನಿಸಿದೆ. ದೆಹಲಿ ಅತ್ಯಾಚಾರ ಪ್ರಕರಣ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ ನ್ಯಾಯಾಂಗ ಮುಖ್ಯಸ್ಥರೊಬ್ಬರು ಲೈಂಗಿಕ ಕಿರುಕುಳ ನೀಡಿದಂತ ಗಂಭೀರ ಆರೋಪ ಕೇಳಿಬಂದಿದ್ದು ಈ ಬಗ್ಗೆ ಕೋರ್ಟಿನ ಮೂರು ಜಡ್ಜ್ ಗಳ ಆಯೋಗ ತನಿಖೆ ನಡೆಸಲಿದೆ.
ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಹೋಟೆಲ್ ವೊಂದರಲ್ಲಿ ತನಗೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಕೀಲೆಯೊಬ್ಬರು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಲು ಜಸ್ಟೀಸ್ ಎಚ್ ಎಲ್ ದತ್ತು, ಜಸ್ಟೀಸ್ ರಂಜಾನಾ ಪ್ರಕಾಶ್ ದೇಸಾಯಿ ಹಾಗೂ ಜಸ್ಟೀಸ್ ಆರ್ ಎಂ ಲೋಧಾ ಅವರಿರುವ ಆಯೋಗವನ್ನು ರಚಿಸಲಾಗಿದೆ.

ಈ ಕುರಿತು ಮಾಧ್ಯಮಗಳ ವರದಿಯನ್ನು ಆಧರಿಸಿ ಯುವತಿಯ ಆರೋಪದ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸಬೇಕು ಮತ್ತು ತನಿಖೆಗೆ ಆದೇಶಿಸಬೇಕು ಎಂದು ಕೋರಿ ವಕೀಲರಾದ ಎಂ.ಎಲ್ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಪಿ.ಸದಾಶಿವಂ ಅವರು, ಈ ಸಂಬಂಧ ಯಾವುದೇ ಆದೇಶ ನೀಡಲು ನಿರಾಕರಿಸಿದ್ದಾರೆ.
ನ್ಯಾಯಾಂಗದ ಮುಖ್ಯಸ್ಥರ ಮೇಲೆಯೇ ಗಂಭೀರ ಆರೋಪ ಕೇಳಿಬಂದಿರುವ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ತನಿಖೆಗೆ ಆದೇಶಿಸಬೇಕು ಎಂದು ಶರ್ಮಾ ವಾದಿಸಿದರು.
ಕೊಲ್ಕತಾದಲ್ಲಿರುವ ನ್ಯಾಷನಲ್ ಯೂನಿವರ್ಸಿಟಿ ಆಫ್ ಜುರಿಡಿಕಲ್ ಸೈನ್ಸ್ (ಎನ್ ಯುಜೆಎಸ್) ವ್ಯಾಸಂಗ ಮಾಡಿ ಈ ವರ್ಷ ಪದವಿ ಪಡೆದಿರುವ ಯುವ ವಕೀಲೆ ಕಳೆದ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಬಳಿ ಪ್ರಾಯೋಗಿಕ ತರಬೇತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪ ಮಾಡಲಾಗಿದೆ. ನವೆಂಬರ್ 6 ರಂದು ಬ್ಲಾಸ್ ವೊಂದರಲ್ಲಿ ಈ ಬಗ್ಗೆ ವಿವರವಾಗಿ ಹೇಳಲಾಗಿದೆ.












Click it and Unblock the Notifications