ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ಶಾಹಿನ್ ಬಾಗ್ ಪ್ರತಿಭಟನೆ ಭವಿಷ್ಯ ನಿರ್ಧಾರ?
ನವದೆಹಲಿ, ಫೆಬ್ರವರಿ.16: ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
ಕಳೆದ ಎರಡು ತಿಂಗಳಿನಿಂದ ಕೇಂದ್ರ ಸರ್ಕಾರದ ವಿರುದ್ಧ ಶಾಹಿನ್ ಬಾಗ್ ರಸ್ತೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಸಾರ್ವಜನಿಕರು ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಬಂದ್ ಮಾಡಿದ್ದರಿಂದ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ ಎಂದು ಅರ್ಜಿದಾರ ವಕೀಲ ಅಮಿತ್ ಸಹಾನಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಶಾಹಿನ್ ಬಾಗ್-ಅಮಿತ್ ಶಾ ನಿವಾಸದತ್ತ ಸಿಎಎ ವಿರೋಧಿ ಹೋರಾಟಗಾರರು
ಕಳೆದ ಫೆಬ್ರವರಿ.10ರಂದು ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಶಾಹಿನ್ ಬಾಗ್ ಪ್ರತಿಭಟನೆ ವಿರುದ್ಧ ಛಾಟಿ ಬೀಸಿತ್ತು. ಪೂರ್ವಾನುಮತಿ ಇಲ್ಲದೇ ಅನಿರ್ದಿಷ್ಟಾವಧಿವರೆಗೂ ಶಾಹಿನ್ ಬಾಗ್ ರಸ್ತೆ ಬಂದ್ ಮಾಡುವುದಕ್ಕೆ ನಿಮಗೆ ಅನುಮತಿ ಕೊಟ್ಟಿದ್ದು ಯಾರು ಎಂದು ಸುಪ್ರೀಂಕೋರ್ಟ್ ಪ್ರತಿಭಟನಾಕಾರರನ್ನು ಪ್ರಶ್ನೆ ಮಾಡಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್:
ಕೇಂದ್ರ ಸರ್ಕಾರವು ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನವದಹೆಲಿಯ ದಕ್ಷಿಣ ಭಾಗದ ಶಾಹಿನ್ ಬಾಗ್ ನಲ್ಲಿ ಕಳೆದ ಎರಡು ತಿಂಗಳಿಂದಲೂ ಉಗ್ರ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಯನ್ನು ತೆರವುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಹಾಗೂ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿತ್ತು. ಸಾರ್ವಜನಿಕ ರಸ್ತೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ತೆರವಿಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ಉತ್ತರ ನೀಡುವಂತೆ ಕೋರ್ಟ್ ಸೂಚನೆ ನೀಡಿತ್ತು.












Click it and Unblock the Notifications