Breaking; ಜಹಾಂಗಿರ್‌ಪುರಿ; ಜೆಸಿಬಿಗಳ ಘರ್ಜನೆಗೆ ಸುಪ್ರೀಂ ತಡೆ
ನವದೆಹಲಿ, ಏಪ್ರಿಲ್ 20; ನವದೆಹಲಿಯ ಜಹಾಂಗಿರ್‌ಪುರಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಬುಧವಾರ ದೆಹಲಿ ಮಹಾನಗರ ಪಾಲಿಕೆ ಪೊಲೀಸರ ಸಹಾಯದೊಂದಿಗೆ ಕಟ್ಟಡಗಳ ತೆರವು ಕಾರ್ಯಾಚರಣೆ ಕೈಗೊಂಡಿತ್ತು.
ಬುಧವಾರ ದೆಹಲಿ ಮಹಾನಗರ ಪಾಲಿಕೆಯ ಜಹಾಂಗಿರ್‌ಪುರಿಯಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯ ಆರಂಭಿಸಿತ್ತು. ಈ ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ ಮತ್ತು ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.

ಅಕ್ರಮ ಕಟ್ಟಡಗಳ ತೆರವು ಕಾರ್ಯ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತಡೆ ನೀಡಿದೆ. ಗುರುವಾರ ಮತ್ತೆ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.
ಬುಧವಾರ ಜಹಾಂಗಿರ್‌ಪುರಿಯಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸಲು 9 ಜೆಸಿಬಿಗಳು ಆಗಮಿಸಿದ್ದವು. ಸ್ಥಳದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು 400 ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಆದರೆ ಕಾರ್ಯಾಚರಣೆ ಆರಂಭವಾದ ತಕ್ಷಣ ಸುಪ್ರೀಂಕೋರ್ಟ್ ಕಾರ್ಯಾಚರಣೆಗೆ ತಡೆ ನೀಡಿದ್ದು ಗುರುವಾರ ಅರ್ಜಿಯ ವಿಚಾರಣೆ ನಡೆಸುವ ತನಕ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.
North Delhi Municipal Corporation halts anti-encroachment drive after Supreme Court order to maintain status-quo pic.twitter.com/zj3wDUEViD
— ANI (@ANI) April 20, 2022
ದೆಹಲಿಯ ಪೊಲೀಸ್ ಆಯುಕ್ತ ದಿಪೇಂದ್ರ ಪಾಠಕ್ ಸೇರಿದಂತೆ ಹಲವು ಅಧಿಕಾರಿಗಳು ಬುಧವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದರು. ಬಳಿಕ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು.
ಹನುಮ ಜಯಂತಿ ಮೆರವಣಿಗೆ ವೇಳೆ ಶನಿವಾರ ಜಹಾಂಗಿರ್‌ಪುರಿಯಲ್ಲಿ ಗಲಭೆ ನಡೆದಿತ್ತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ ಗಲಭೆ ವೇಳೆ ವ್ಯಕ್ತಿಯೊಬ್ಬ ಪಿಸ್ತೂಲ್ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿದ್ದ.
ಸೋಮವಾರ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲು ಹೋದಾಗ ಮತ್ತೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಮಂಗಳವಾರ ಪ್ರದೇಶದಲ್ಲಿ ಪರಿಸ್ಥಿತಿ ಹತೋಟಿಯಲ್ಲಿತ್ತು.
ಆದರೆ ಬುಧವಾರ ಅಕ್ರಮ ಕಟ್ಟಡ, ಒತ್ತುವರಿ ತೆರವು ಮಾಡುವಾಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸರ ಅಗತ್ಯವಿದೆ ಎಂದು ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದರು. ಇದರಿಂದಾಗಿ ಸ್ಥಳದಲ್ಲಿ 400 ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಸುಪ್ರೀಂಕೋರ್ಟ್ ಆದೇಶ ಬರುತ್ತಿದ್ದಂತೆಯೇ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಗುರುವಾರ ಅರ್ಜಿ ವಿಚಾರಣೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.












Click it and Unblock the Notifications