ಹೌದು, ನಾನು ಅತ್ಯಾಚಾರ ಮಾಡಿದ್ದೆ: ಬಾಪು ಪುತ್ರ
ನವದೆಹಲಿ, ಡಿ.11: ಅಪ್ರಾಪ್ತ ವಯಸ್ಸಿನ ಆಶ್ರಮವಾಸಿ ಬಾಲಕಿ ಹಾಗೂ ಈ ಮೊದಲು ಆಶ್ರಮದಲ್ಲಿದ್ದ ಸಹೋದರಿಯರಿಬ್ಬರಲ್ಲಿ ಒಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ನಾರಾಯಣ ಸಾಯಿ ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ಗುಜರಾತ್ ಪೊಲೀಸರು ಹೇಳಿದ್ದಾರೆ.
ವಿಚಾರಣೆ ವೇಳೆ ಅನೇಕ ಸತ್ಯಗಳನ್ನು ಹೊರಹಾಕಿರುವ ಅಸಾರಾಮ್ ಬಾಪು ಪುತ್ರ ನಾರಾಯಣ ಸಾಯಿ, ತಾನು ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದೆ ಎನ್ನುವುದು ಸರಿಯಲ್ಲ. ಅದು ಸಹಮತ ಸೆಕ್ಸ್ ಆಗಿತ್ತು ಎಂದು ನಾರಾಯಣ ಸಾಯಿ ಹೇಳಿದ್ದಾನೆ.
ಜತೆಗೆ ಒಂದಲ್ಲಾ ಎಂಟು ಮಂದಿ ಮಹಿಳೆಯರನ್ನು ದೇವರ ಹೆಸರಿನಲ್ಲಿ ನಂಬಿಸಿ ಅತ್ಯಾಚಾರ ಮಾಡಿದ್ದೇನೆ. ಬಹುತೇಕ ಮಹಿಳೆಯರಿಗೆ ಇಷ್ಟವಿಲ್ಲದಿರುವ ಹೊರತಾಗಿಯೂ ಭೂತ ಬಿಡಿಸುವ ನೆಪದಲ್ಲಿ ಅವರೊಂದಿಗೆ ಒತ್ತಾಯಪೂರ್ವಕ ಲೈಂಗಿಕತೆ ನಡೆಸಿದ್ದೇನೆ. ಮಾತ್ರವಲ್ಲ, ಜಮುನಾ ಎಂಬ ಭಕ್ತೆಯೊಬ್ಬಳಿಗೆ ಹುಟ್ಟಿದ ಗಂಡು ಮಗುವಿನ ಅಪ್ಪನೂ ನಾನೇ ಎಂದು ಹೇಳಿಕೆ ನೀಡಿ ಪೊಲೀಸರಿಗೆ ಅಚ್ಚರಿ ಮೂಡಿಸಿದ್ದಾನೆ.

ವಿಚ್ಛೇದನಕ್ಕೆ ಅರ್ಜಿ?: ನಾರಾಯಣ ಸಾಯಿ ಅವರ ವಿಚಾರಣೆಯನ್ನು ಅವರ ಪತ್ನಿ ಜಾನಕಿ ಸಮ್ಮುಖದಲ್ಲೇ ನಡೆಸಲಾಯಿತು ಎನ್ನಲಾಗಿದೆ. ಜಮುನಾ ಅಲಿಯಾಸ್ ಭಾವನಾ ಪಟೇಲ್ ಗೆ ನನ್ನಿಂದ ಮಗು ಹುಟ್ಟಿದೆ ಎಂಬುದು ನನ್ನ ಪತ್ನಿಗೂ ಗೊತ್ತಿದೆ ಎಂದು ಸಾಯಿ ಹೇಳಿದ್ದಾನೆ.
ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ನಾರಾಯಣ ಸಾಯಿ ಪತ್ನಿ ಜಾನಕಿ, ನನ್ನ ಪತಿ ಹಾಗೂ ಜಮುನಾ ನಡುವಿನ ಅನೈತಿಕ ಸಂಬಂಧದ ಬಗ್ಗೆ ತಿಳಿಯುತ್ತಿದ್ದಂತೆ ನಾನು ಅವನನ್ನು ತೊರೆದು ಬೇರೆಡೆ ವಾಸಿಸುತ್ತಿದ್ದೇನೆ. ನಾನು ಎಂದಿಗೂ ಜಾನಕಿಗೆ ಬೆದರಿಕೆ ಒಡ್ಡಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದಿದ್ದಾಳೆ. ಅಲ್ಲದೆ, ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕುವುದಾಗಿ ಘೋಷಿಸಿದ್ದಾಳೆ
ಆಶ್ರಮದಲ್ಲಿದ್ದ 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ದೇವಮಾನನನ್ನು ಕಳೆದ ಆಗಸ್ಟ್ ನಲ್ಲೇ ಜೈಲಿಗೆ ಹಾಕಲಾಗಿದೆ. ನಂತರ ಈ ಹಿಂದೆ 2002-05ರಲ್ಲಿ ಆಶ್ರಮದಲ್ಲಿದ್ದ ತಮ್ಮ ಮೇಲೆ ಅಸಾರಾಂ ಹಾಗೂ ಮಗ ನಾರಾಯಣ್ ಸಾಯಿ ಅತ್ಯಾಚಾರ ಎಸಗಿದ್ದರು ಎಂದು ಅಹ್ಮದಾಬಾದ್ ನಿವಾಸಿಗಳಾಗಿರುವ ಸಹೋದರಿಯರಿಬ್ಬರು ಅ.6ರಂದು ಕೇಸು ದಾಖಲಿಸಿದ್ದರು. ನಾರಾಯಣ್ ಸಾಯಿ ವಿರುದ್ಧ ಸೂರತ್ ನ ಜೆಹಾಂಗೀರ್ ಪುರ್ ನಲ್ಲಿ ಕೇಸು ದಾಖಲಿಸಲಾಗಿತ್ತು.
ಇತ್ತೀಚೆಗೆ ಅಸಾರಾಂ ಹಾಗೂ ನಾರಾಯಣ ಸಾಯಿ ವಿರುದ್ಧ ಸುಮಾರು 1,011 ಪುಟಗಳಷ್ಟು ಆರೋಪಪಟ್ಟಿ[ಇದರ ವಿವರ ಇಲ್ಲಿ ಓದಿ]ಯನ್ನು ಜೋಧಪುರದ ಕೋರ್ಟಿಗೆ ಸಲ್ಲಿಸಲಾಗಿತ್ತು. 121 ದಾಖಲೆ ಪತ್ರ, ಹೇಳಿಕೆಗಳು ಹಾಗೂ 58 ಸಾಕ್ಷಿಗಳ ಹೆಸರನ್ನು ಇದರಲ್ಲಿ ನಮೂದಿಸಲಾಗಿದೆ. ಅಸಾರಾಂ ಹಾಗೂ ಇತರೆ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 342,376(ಎಫ್), 376 (ಡಿ), 354(ಎ), 506 ಹಾಗೂ 109 ಅನ್ವಯ ಪ್ರಕರಣ ದಾಖಲಿಸಲಾಗಿತ್ತು.












Click it and Unblock the Notifications