ಶಬರಿಮಲೆ ಮೇಲ್ಮನವಿ ಅರ್ಜಿ: ಸುಪ್ರೀಂ ಕೋರ್ಟ್ ನಿಂದ ನಾಳೆ ತೀರ್ಪು
ನವದೆಹಲಿ, ನವೆಂಬರ್ 13: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆರವುಗೊಳಿಸಿದ್ದ ಸುಪ್ರೀಂ ಕೋರ್ಟ್ ತೀರ್ಪಿಗೆ ಸಲ್ಲಿಸಲಾಗಿದ್ದ ಮೇಲ್ಮನವಿಯ ತೀರ್ಪು ನವೆಂಬರ್ 13 ರಂದು ಪ್ರಕಟವಾಗಲಿದೆ.
ಸಾಕಷ್ಟು ವಿವಾದ ಸೃಷ್ಟಿಸಿದ್ದ ಈ ಪ್ರಕರಣದ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯ 2018 ರ ಸೆಪ್ಟೆಂಬರ್ ನಲ್ಲಿ ಮಹತ್ವದ ತೀರ್ಪು ನೀಡಿತ್ತು.
ಈ ಮೂಲಕ ಸುಮಾರು 800 ವರ್ಷಗಳಿಂದ ದೇವಾಯ ಪ್ರವೇಶಕ್ಕೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿತ್ತು. ಇದನ್ನು ವಿರೋಧಿಸಿ ಸುಮಾರು 56 ಮೇಲ್ಮನವಿಗಳು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದವು. ಈ ಎಲ್ಲವುಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಮಹತ್ವದ ತೀರ್ಪು ನೀಡಲಿದೆ.

ಪ್ರಕರಣವೇನು?
ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿತ್ತು. ಆದರೆ 2018 ರ ಸೆಪ್ಟೆಂಬರ್ ನಲ್ಲಿ ಈ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಮಹಿಳೆಯರು ದೇವಾಲಯ ಪ್ರವೇಶಿಸಬಹುದು ಎಂಬ ತೀರ್ಪು ನೀಡಿತ್ತು.

ತೀರ್ಪು ಕೊಟ್ಟಿದ್ದು ಯಾರು?
ಸುಪ್ರೀಂ ಕೋರ್ಟ್ ನ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್‌ಎಫ್ ನಾರಿಮನ್, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ ಮತ್ತು ಇಂದೂ ಮಲ್ಹೋತ್ರಾ ಅವರನ್ನೊಳಗೊಂಡ ಪಂಚ ಸದಸ್ಯ ಪೀಠ, ಮಹಿಳೆಯರಿಗೆ ಪ್ರವೇಶ ನೀಡುವಂತೆ ಆದೇಶ ನೀಡಿತ್ತು. ಅಚ್ಚರಿ ಯೆಂದರೆ 4:1 ಅನುಪಾತದ ಈ ತೀರ್ಪನ್ನು ಪಂಚಸದಸ್ಯ ಪೀಠದಲ್ಲಿದ್ದ ಏಕೈಕ ಮಹಿಳೆ ಇಂದು ಮಲ್ಹೋತ್ರಾ ವಿರೋಧಿಸಿದ್ದರು!

ಮಹಿಳೆಯರಿಗೂ ಪೂಜಿಸುವ ಹಕ್ಕಿದೆ
ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸುವ ಮಂಡಳಿ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಭಾರತೀಯ ಸಂವಿಧಾನದ 25 (1) ವಿಧಿಯ ಅಡಿ ಕಾನೂನು ಪೂಜಿಸುವ ಹಕ್ಕನ್ನು ಪ್ರತಿಯೊಬ್ಬರಿಗೂ ಸಮಾನವಾಗಿ ನೀಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಮಹಿಳೆಯಾಗಿ ನೀವು ಪುರುಷರಂತೆಯೇ ಪೂಜಿಸುವ ಹಕ್ಕನ್ನು ಹೊಂದಿದ್ದೀರಿ. ಇದಕ್ಕೆ ಕಾನೂನಿನ ಬೆಂಬಲ ಪಡೆಯುವ ಅವಶ್ಯಕತೆಯಿಲ್ಲ. ಇದು ಸಂವಿಧಾನದಲ್ಲಿಯೇ ಇದೆ ಎಂದು ಅದು ಹೇಳಿತ್ತು.

ಮೇಲ್ಮನವಿ ಅರ್ಜಿ ತೀರ್ಪು ನೀಡುವ ಪೀಠದಲ್ಲಿ ಯಾರಿದ್ದಾರೆ?
ಇದೀಗ ಮೇಲ್ಮನವಿ ಅರ್ಜಿ ತೀರ್ಪು ನೀಡಲಿರುವ ಪಂಚ ಸದಸ್ಯ ಸಾಂವಿಧಾನಿಕ ಪೀಠದಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ಆರ್.ಎಫ್. ನಾರಿಮನ್, ಎ.ಎಂ.ಖಾನ್ವಿಲ್ಕರ್ ಮತ್ತು ಇಂದು ಮಲ್ಹೋತ್ರಾ ಅವರಿದ್ದಾರೆ. ಗುರುವಾರ ಬೆಳಿಗ್ಗೆ 10:30 ಕ್ಕೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ.












Click it and Unblock the Notifications