ಮೋದಿಯನ್ನು ಅಪ್ಪಿಕೊಂಡು ಸದನಕ್ಕೆ ಹಿಂದು ಧರ್ಮದ ಪಾಠ ಮಾಡಿದ ರಾಹುಲ್
Recommended Video

ನವದೆಹಲಿ, ಜುಲೈ 20: ಸದನವು ಇಂದು ವಿಶೇಷ ಘಟನೆಗೆ ಸಾಕ್ಷಿಯಾಯಿತು. ಸದನದಲ್ಲಿ ಸದಾ ಮೋದಿ ವಿರುದ್ಧ ವಾಗ್ದಾಳಿ ಮಾಡುವ ರಾಹುಲ್ ಗಾಂಧಿ, ಮೋದಿ ಅವರನ್ನು ಸದನದಲ್ಲೇ ಆಲಿಂಗಿಸಿಕೊಂಡು ಗಮನ ಸೆಳೆದರು.
ಹಿಂದೂ ಧರ್ಮದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಎದುರಿನವನು ನಿಮ್ಮ ಮೇಲೆ ಕೋಪ ಮಾಡಿಕೊಂಡರು, ಬೈದರೂ, ದ್ವೇಷ ಮಾಡಿದರೂ ಪ್ರೀತಿಸುವುದೇ ಹಿಂದೂ ಧರ್ಮ, ನೀವು ನನ್ನನ್ನು ಎಷ್ಟೇ ದ್ವೇಷಿಸಿದರೂ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದ ರಾಹುಲ್ ಗಾಂಧಿ ಮೋದಿ ಅವರ ಖುರ್ಚಿ ಬಳಿ ತೆರಳಿ ಅವರನ್ನು ಅಪ್ಪಿಕೊಂಡರು.
ಅವರ ಈ ವರ್ತನೆ ಸದನದಲ್ಲಿರುವವರಲ್ಲಿ ಕೆಲ ಕಾಲ ಆಶ್ಚರ್ಯ ಉಂಟುಮಾಡಿತು. ಮೋದಿ ಅವರನ್ನು ಆಲಂಗಿಸಿಕೊಂಡು ತಮ್ಮ ಸ್ಥಾನಕ್ಕೆ ಮರಳಿದ ರಾಹುಲ್ ಗಾಂಧಿ, ಇದು ನಿಜವಾದ ಹಿಂದೂ ಧರ್ಮ. ಬಿಜೆಪಿ ಅಥವಾ ಆರ್‌ಎಸ್‌ಎಸ್ ಹೇಳುತ್ತಿರುವುದು ನಿಜವಾದ ಹಿಂದೂ ಧರ್ಮವಲ್ಲ ಎಂದರು.

ಮೊದಲಿಗೆ ಮುಖ ಗಂಟು ಹಾಕಿದ ಮೋದಿ
ರಾಹುಲ್ ಗಾಂಧಿ ಆಲಿಂಗನಕ್ಕೆ ಮೊದಲು ಮುಖ ಗಂಟು ಹಾಕಿಕೊಂಡ ಮೋದಿ ಆ ನಂತರ ಖುಷಿಯಿಂದಲೇ ಪ್ರತಿಕ್ರಿಯಿಸಿದರು. ರಾಹುಲ್ ಗಾಂಧಿ ಅವರಿಗೆ ಹಸ್ತ ಲಾಘವ ನೀಡಿ ಕೆಲವು ಸೆಕೆಂಡ್‌ಗಳ ನಗುತ್ತಾ ಮಾತನಾಡಿ. ಬೆನ್ನು ತಟ್ಟಿ ಕಳುಹಿಸಿದರು.

ಅಭೂತಪೂರ್ವ ಸಂದರ್ಭವೇ ಹೌದು
ಇದೊಂದು ಅಭೂತಪೂರ್ವ ವಿಷಯವೇ ಆಗಿದ್ದು, ಬಹುಷಃ ಈ ವರೆಗೆ ಸದನದಲ್ಲಿ ಚರ್ಚೆ ನಡೆಯುವಾಗಿ ವಿರೋಧ ಪಕ್ಷದ ಸದಸ್ಯರೊಬ್ಬರು ಆಡಳಿತ ಪಕ್ಷದ ಮುಖಂಡರನ್ನು ಹೀಗೆ ಅಪ್ಪಿಕೊಂಡ ಉದಾಹರಣೆ ಇಲ್ಲ.

ಬಹುತೇಕರ ಸದಸ್ಯರಿಂದ ಮೆಚ್ಚುಗೆ
ರಾಹುಲ್ ಗಾಂಧಿ ಅವರ ಈ ವರ್ತನೆಗೆ ಸದನದ ಬಹುತೇಕ ಸದಸ್ಯರು ಮೇಜು ತಟ್ಟಿ ಸ್ವಾಗತ ಕೋರಿದರು. ಸ್ಪೀಕರ್ ಸುಮಿತ್ರಾ ಅವರೂ ಕೂಡ ನಗುವಿನ ಸಮ್ಮತಿಯನ್ನು ನೀಡಿದರು.

ಇದು ನಿಜವಾದ ಹಿಂದುತ್ವ
ಮೋದಿಯನ್ನು ಆಲಿಂಗಿಸಿಕೊಂಡು ಮರಳಿ ತಮ್ಮ ಸ್ಥಾನಕ್ಕೆ ಬಂದ ನಂತರ ಮತ್ತೆ ಭಾಷಣ ಮಾಡಿದ ರಾಹುಲ್ ಗಾಂಧಿ, ಇದು ನಿಜವಾದ ಹಿಂದುತ್ವ, ಒಬ್ಬರನ್ನೊಬ್ಬರು ಪ್ರೀತಿಸುವುದು ಹಿಂದುತ್ವ ಆರ್‌ಎಸ್‌ಎಸ್ ಹೇಳುವುದು ಹಿಂದುತ್ವ ಅಲ್ಲ ಎಂದು ಪ್ರತಿಪಾದಿಸಿದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್
ರಾಹುಲ್ ಗಾಂಧಿ ಮೋದಿ ಅವರನ್ನು ಸದನದಲ್ಲಿ ತಬ್ಬಿಕೊಂಡ ಚಿತ್ರ ಕ್ಷಣ ಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿದೆ. ಹಲವು ಮೀಮ್‌ಗಳು ಸೃಷ್ಠಿಯಾಗಿದ್ದು ಇನ್ನೂ ಕೆಲವು ದಿನ ಇದೇ ಚಿತ್ರಗಳು ಸಾ.ಜಾಲತಾಣದಲ್ಲಿ ರಾರಾಜಿಸಲಿವೆ.












Click it and Unblock the Notifications