ಪನಾಮಾ ಪ್ರಕರಣ: ಸತತ 5 ಗಂಟೆಗಳ ಕಾಲ ಇಡಿಯಿಂದ ಐಶ್ವರ್ಯಾ ರೈ ವಿಚಾರಣೆ
ನವದೆಹಲಿ, ಡಿಸೆಂಬರ್ 21: ಪನಾಮಾ ಪೇಪರ್ಸ್ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಪಡೆದಿದ್ದ ಖ್ಯಾತ ನಟಿ ಐಶ್ವರ್ಯಾ ರೈ ಸತತ ಐದು ಗಂಟೆಗಳ ಕಾಲ ಇಡಿ ವಿಚಾರಣೆಗೆ ಒಳಪಟ್ಟಿದ್ದಾರೆ. ಇನ್ನು ಈ ವಿಚಾರಣೆಯ ಬಳಿಕ ಐಶ್ವರ್ಯಾ ರೈ ಮಾಧ್ಯಮಕ್ಕೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಸೋಮವಾರ ಸಂಜೆ ದೆಹಲಿಯ ಇಂಡಿಯಾ ಗೇಟ್ ಬಳಿಯಿರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಸತತ ಐದು ಗಂಟೆಗಳ ಕಾಲ ಐಶ್ವರ್ಯಾ ರೈ ವಿಚಾರಣೆ ನಡೆಸಲಾಗಿದೆ. ಇನ್ನು ಮತ್ತೆ ಐಶ್ವರ್ಯಾ ರೈಗೆ ಸಮನ್ಸ್ ನೀಡಲಾಗುತ್ತದೆಯೇ ಎಂಬ ಬಗ್ಗೆ ಇಡಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ಉಲ್ಲಂಘಿಸಿ ವಿದೇಶದಲ್ಲಿ ಸಂಪತ್ತನ್ನು ಹೊಂದಿರುವ ಆರೋಪವನ್ನು ಐಶ್ವರ್ಯಾ ರೈ ಬಚ್ಚನ್ ಎದುರಿಸುತ್ತಿದ್ದಾರೆ. ಪನಾಮ ಪೇಪರ್ಸ್ ಎಂಬ ರಹಸ್ಯ ಪಟ್ಟಿಯಲ್ಲಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯಾ ಸೇರಿದಂತೆ ಸುಮಾರು 500 ಪ್ರಮುಖ ಭಾರತೀಯರ ಹೆಸರುಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರುಗಳಿದ್ದು ಈ ದಾಖಲೆ ಸೋರಿಕೆ ಬೆನ್ನಲ್ಲೇ ಐಶ್ವರ್ಯಾ ರೈ ವಿಚಾರಣೆಗೆ ಒಳಪಡುತ್ತಿದ್ದಾರೆ.

ಇನ್ನು ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಆರು ಅಧಿಕಾರಿಗಳ ತಂಡ ಐಶ್ವರ್ಯಾ ರೈ ವಿಚಾರಣೆಯನ್ನು ನಡೆಸಿದೆ ಎಂದು ವರದಿಯು ಹೇಳಿದೆ. ಐಶ್ವರ್ಯಾ ರೈ ಮಾವ ಅಮಿತಾಭ್ ಬಚ್ಚನ್‌ಗೆ ಸೇರಿದ ಸಂಸ್ಥೆಗೆ ಸಂಬಂಧಿಸಿದಂತೆ 50 ಪ್ರಶ್ನೆಗಳನ್ನು ಐಶ್ವರ್ಯಾಗೆ ಕೇಳಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಐಶ್ವರ್ಯಾ ರೈ ಮೂರು ಬಾರಿ ಸಮನ್ಸ್ ಅನ್ನು ಪಡೆದಿದ್ದಾರೆ. ಈ ಹಿಂದೆ ವಿಚಾರಣೆಗೆ ಹಾಜರಾಗಿರಲಿಲ್ಲ, ಆದರೆ ಈಗ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಶ್ಯರ್ಯಾ ರೈಗೆ ಕೇಳಿದ ಪ್ರಶ್ನೆಗಳು ಯಾವುದು?
* ಅಮಿಕ್ ಪಾಟ್‌ನರ್ಸ್ 2005 ರಲ್ಲಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್‌ನಲ್ಲಿ ಸಂಘಟಿತವಾದ ಮತ್ತು ನೋಂದಾಯಿಸಲಾದ ಕಂಪನಿಯಾಗಿದೆ. ಈ ಕಂಪನಿಯೊಂದಿಗೆ ನೀವು ಯಾವ ಸಂಬಂಧವನ್ನು ಹೊಂದಿದ್ದೀರಿ?
* ಮೊಸಾಕ್ ಫೋನ್ಸೆಕಾ ಕಂಪನಿಯನ್ನು ನೋಂದಾಯಿಸಿದ ಕಾನೂನು ಸಂಸ್ಥೆ ನಿಮಗೆ ತಿಳಿದಿದೆಯೇ?
* ಈ ಕಂಪನಿಯ ನಿರ್ದೇಶಕರಲ್ಲಿ ನೀವು, ನಿಮ್ಮ ತಂದೆ ಕೋಟೆದಡಿರಮಣ ರೈ ಕೃಷ್ಣ ರೈ, ನಿಮ್ಮ ತಾಯಿ ಕವಿತಾ ರೈ ಮತ್ತು ನಿಮ್ಮ ಸಹೋದರ ಆದಿತ್ಯ ರೈ ಇದ್ದಾರೆ. ಇದರ ಬಗ್ಗೆ ನೀವು ಏನು ಹೇಳಬಹುದು?
* ಆರಂಭಿಕ ಪಾವತಿಸಿದ ಬಂಡವಾಳವು 50,000 ಡಾಲರ್ ಆಗಿದೆ. ಪ್ರತಿ ಷೇರು ಒಂದು ಡಾಲರ್ ಮೌಲ್ಯದ್ದಾಗಿತ್ತು ಮತ್ತು ಪ್ರತಿ ನಿರ್ದೇಶಕರು 12,500 ಷೇರುಗಳನ್ನು ಹೊಂದಿದ್ದರು. ನಿರ್ದೇಶಕರಾಗಿದ್ದ ನೀವು ಷೇರುದಾರರಾಗಲು ಕಾರಣವೇನು?
* ಜೂನ್ 2005 ರಲ್ಲಿ ನೀವು ಷೇರುದಾರರಾಗಿದ್ದು ಏಕೆ?
* 2008 ರಲ್ಲಿ ಕಂಪನಿಯು ಏಕೆ ನಿಷ್ಕ್ರಿಯವಾಯಿತು?
* ಹಣಕಾಸಿನ ವಹಿವಾಟುಗಳಿಗೆ ಆರ್‌ಬಿಐನಿಂದ ಅನುಮತಿ ಕೇಳಲಾಗಿದೆಯೇ?
ಈ ಮೊದಲಾದ ಪ್ರಶ್ನೆಗಳು ಸೇರಿದಂತೆ ಐಶ್ವರ್ಯಾ ರೈ ಮಾವ ಅಮಿತಾಭ್ ಬಚ್ಚನ್‌ಗೆ ಸೇರಿದ ಸಂಸ್ಥೆಗೆ ಸಂಬಂಧಿಸಿದಂತೆ 50 ಪ್ರಶ್ನೆಗಳನ್ನು ಐಶ್ವರ್ಯಾಗೆ ಕೇಳಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಪನಾಮ ಪೇಪರ್ಸ್ ಎಂಬ ರಹಸ್ಯ ಪಟ್ಟಿಯಲ್ಲಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯಾ ಸೇರಿದಂತೆ ಸುಮಾರು 500 ಪ್ರಮುಖ ಭಾರತೀಯರ ಹೆಸರುಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರುಗಳಿವೆ. ಪನಾಮಾ ಪೇಪರ್ಸ್ ದಾಖಲೆಯಲ್ಲಿ ಸುಮಾರು 11.5 ಮಿಲಿಯನ್ ಗೌಪ್ಯ ದಾಖಲೆಗಳು ಇದೆ. ಮೊಸಾಕ್ ಫೋನ್ಸೆಕಾ ಎಂಬ ಕಾನೂನು ಸಂಸ್ಥೆಯು ಜಗತ್ತಿನ ನಾಲ್ಕನೇ ಅತಿ ದೊಡ್ಡ ಸಂಸ್ಥೆ. ಆ ಸಂಸ್ಥೆಯು ಈ ದಾಖಲೆಯನ್ನು ಬಹಿರಂಗ ಪಡಿಸಿದ್ದು ಹನ್ನೊಂದೂವರೆ ಮಿಲಿಯನ್ ನಷ್ಟು ಅವ್ಯವಹಾರದ ದಾಖಲೆಗಳು ಇದರಲ್ಲಿ ಇದೆ. ಇನ್ನು ಐಶ್ವರ್ಯಾ ರೈಗೆ ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಯಾವೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ. ಆ ಪ್ರಶ್ನೆಗಳು ಈ ಕೆಳಗೆ ಇದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications