ಮಾನ್ಸೂನ್ ಆರಂಭ: ನವದೆಹಲಿಯಲ್ಲಿ ಮುಂದಿನ 2-3 ದಿನ ಭಾರಿ ಮಳೆ
ನವದೆಹಲಿ, ಜುಲೈ 13: ಮಳೆಯ ನಿರೀಕ್ಷೆಯಲ್ಲಿದ್ದ ರಾಷ್ಟ್ರ ರಾಜಧಾನಿ ಧರೆಗೆ ವರುಣ ತಂಪೆರೆದಿದ್ದಾನೆ. ಮಂಗಳವಾರ ನವದೆಹಲಿ ಪ್ರವೇಶಿಸಿರುವ ಮಾನ್ಸೂನ್ ಮಾರುತಗಳಿಂದ ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ನವದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 2 ರಿಂದ 3 ದಿನಗಳವರೆಗೂ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. "ಕಳೆದ ಎರಡು ದಿನಗಳಲ್ಲಿ ದೆಹಲಿ ಹೊರತುಪಡಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿತ್ತು," ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಮಾಧವನ್ ರಾಜೀವನ್ ಟ್ವೀಟ್ ಮಾಡಿದ್ದಾರೆ.

"ನವದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಲಿದ್ದು, 20 ರಿಂದ 40 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಮುಂದಿನ 2 ಗಂಟೆಗಳಲ್ಲಿ ಎನ್‌ಸಿಆರ್, ಬಹದ್ದೂರ್‌ಗರ್, ಗುರುಗ್ರಾಮ್, ಫರಿದಾಬಾದ್, ಲೋನಿ ಡೆಹತ್, ನೋಯ್ಡಾ, ಹರಿಯಾಣದ ಗೋಹಾನಾ, ಸೋನಿಪತ್, ರೋಹ್ಟಕ್ ಹಾಗೂ ಉತ್ತರ ಪ್ರದೇಶದ ಖೇಕ್ರಾದಲ್ಲಿ ಮಳೆ ಬೀಳುವ ಸಾಧ್ಯತೆಯಿದೆ," ಎಂದು ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.

ಮಾನ್ಸೂನ್ ಮಾರುತಗಳ ನಿರೀಕ್ಷೆ:
ನವದೆಹಲಿಯಲ್ಲಿ ಈ ಬಾರಿ ಹವಾಮಾನ ಇಲಾಖೆ ನಿರೀಕ್ಷಿಸಿದ ದಿನಾಂಕಕ್ಕಿಂತ ಮೊದಲೇ ಮಾನ್ಸೂನ್ ಮಾರುತ ಪ್ರವೇಶಿಸಿದೆ. ಮಾನ್ಸೂನ್ ಮಳೆ ಆರಂಭಕ್ಕಿಂತ 12 ದಿನ ಮೊದಲೇ ಮಳೆ ಶುರುವಾಗುವ ಬಗ್ಗೆ ಸೂಚನೆ ನೀಡಲಾಗಿತ್ತು. ಅದರಂತೆ ಜೂನ್ 15 ವೇಳೆಗೆ ಮಾನ್ಸೂನ್ ಮಳೆ ಆರಂಭವಾಗಲಿದೆ ಎಂದು ಊಹಿಸಲಾಗಿತ್ತು. ಸಾಮಾನ್ಯವಾಗಿ ಜೂನ್ 27ರಂದು ನವದೆಹಲಿ ಪ್ರವೇಶಿಸಿಲಿರುವ ಮಾನ್ಸೂನ್ ಮಾರುತ ಜುಲೈ 8ರ ಹೊತ್ತಿಗೆ ಇಡೀ ದೇಶಕ್ಕೆ ವ್ಯಾಪಿಸುತ್ತದೆ. ಕಳೆದ ವರ್ಷ ನವದೆಹಲಿಯಲ್ಲಿ ಜೂನ್ 25ರಂದು ಆರಂಭವಾದ ಮಾನ್ಸೂನ್ ಮಳೆಯು ಜೂನ್ 29ರ ಹೊತ್ತಿಗೆ ದೇಶಕ್ಕೆ ಹರಡಿತ್ತು.












Click it and Unblock the Notifications