ಕಿರುಕುಳ : ಆಕ್ಸೆಂಚರ್ ಉದ್ಯೋಗಿಗಳ ಮೇಲೆ ಎಫ್ ಐಆರ್

ನನ್ನ ಜತೆ ನಾಲ್ವರು ಹಿರಿಯ ಅಧಿಕಾರಿಗಳು ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಕೆಟ್ಟ ಪದಗಳನ್ನು ಬಳಸಿ ಮಾತನಾಡಿಸಿದ್ದರಲ್ಲದೆ ಕೈಸನ್ನೆ ಬಾಯ್ಸನ್ನೆ ಮಾಡುತ್ತಾ ಕಿರುಕುಳ ನೀಡಿದ್ದಾರೆ ಎಂದು ಆಕ್ಸೆಂಚರ್ ಸಂಸ್ಥೆಯ ಯುವ ಮಹಿಳಾ ಟೆಕ್ಕಿ ನೀಡಿದ ದೂರಿನ ಮೇಲೆ ಗುರ್ ಗಾಂವ್ ಪೊಲೀಸರು ಕ್ರಮ ಜರುಗಿಸಿದ್ದಾರೆ.
ಆರೋಪ ಹೊತ್ತಿರುವ ನಾಲ್ವರು ಹಿರಿಯ ಅಧಿಕಾರಿಗಳು ಕೆಲಸದ ಅವಧಿಯಲ್ಲಿ ಕಾರಣವಿಲ್ಲದೆ ನನ್ನ ಡೆಸ್ಕ್ ಬಳಿ ಬಂದು ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಅವರ ಅಪೇಕ್ಷೆಯಂತೆ ನಾನು ನಡೆದುಕೊಳ್ಳಲಿಲ್ಲ ಎಂದು ಇತರೆ ಉದ್ಯೋಗಿಗಳ ಎದುರು ನನ್ನನ್ನು ಆಗಾಗ ಬೈಯುತ್ತಿದ್ದರು ಎಂದು ಯುವತಿ ತನ್ನ ದೂರಿನಲ್ಲಿ ಹೇಳಿದ್ದಾರೆ.
ಬುಧವಾರ(ನ.6) ಆಕ್ಸೆಂಚರ್ ಕಚೇರಿಗೆ ಭೇಟಿ ನೀಡಿದ್ದ ಪೊಲೀಸರು ಯಾರೊಬ್ಬರನ್ನು ಬಂಧಿಸದೆ ವಿಚಾರಣೆ ನಡೆಸಿ ತೆರಳಿಸಿದ್ದಾರೆ ಎಂದು ತಿಳಿದು ಬಂದಿದೆ. ಸಂಸ್ಥೆಯ ಎಚ್ ಆರ್ ಮ್ಯಾನೇಜರ್ ಆದಿತ್ಯ ನಾಗಪಾಲ್, ಟೀಂ ಲೀಡರ್ ಅಶ್ವಿನಿ ಸಿನ್ಹಾ, ಚೈತನ್ಯ ಮದುರಾ, ಅನಿಂದ್ಯಾ ದತ್ತ ಇವರ ಮೇಲೆ ಎಫ್ ಐಆರ್ ದಾಖಲಾಗಿದೆ.
'ವಿಚಾರಣೆ ಪ್ರಗತಿಯಲ್ಲಿದ್ದು ಅವಶ್ಯಬಿದ್ದರೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು' ಎಂದು ಉದ್ಯೋಗ್ ವಿಹಾರ್ ಪೊಲೀಸ್ ಠಾಣಾಧಿಕಾರಿ ರಾಜೇಂದ್ರ ಸಿಂಗ್ ಹೇಳಿದ್ದಾರೆ.
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಕ್ಸೆಂಚರ್ ವಕ್ತಾರರು, 'ನಮಗೆ ಈ ಘಟನೆ ಬಗ್ಗೆ ತಿಳಿದು ಬಂದಿದೆ. ಕಾನೂನು ಕ್ರಮ ಜರುಗಿಸಲು ಸಂಪೂರ್ಣ ಸಹಕಾರ ನೀಡಲಾಗುತ್ತದೆ. ಸಂಸ್ಥೆಗೆ ತನ್ನದೇ ಆದ ಬಿಸಿನೆಸ್ ನಿಯಮಗಳಿವೆ ಅದರಂತೆ ಕ್ರಮ ಜರುಗಿಸಲಾಗುವುದು' ಎಂದಿದ್ದಾರೆ. ಆದರೆ, ನಾಲ್ವರ ಮೇಲೆ ಯಾವುದೇ ಕ್ರಮ ಜರುಗಿಸಿದ ಬಗ್ಗೆ ಇನ್ನೂ ವರದಿ ಬಂದಿಲ್ಲ.












Click it and Unblock the Notifications