ವಾರಣಾಸಿಯಿಂದಲೇ ಮೋದಿ ಸ್ಪರ್ಧೆ ಖಚಿತ: ರಾಜನಾಥ್
ನವದೆಹಲಿ, ಮಾರ್ಚ್ 16: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಖಚಿತಪಡಿಸಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜನಾಥ್ ಸಿಂಗ್, ತಾವು ಉತ್ತರ ಪ್ರದೇಶದ ಲಕ್ನೋದಿಂದ ಸ್ಪರ್ಧಿಸಲಿರುವುದಾಗಿ ತಿಳಿಸಿದ್ದಾರೆ.
'ನಾನು ಲಕ್ನೋದಿಂದ ಸ್ಪರ್ಧಿಸಲಿದ್ದೇನೆ. ಲಕ್ನೋದ ಜನರಿಂದ ನನಗೆ ಪ್ರೀತಿ ದೊರೆತಿದೆ. ಮೋದಿಜಿ ಅವರು ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ' ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ಮೋದಿ ಅವರು ಪುರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಾಬಲ್ಯ ಕಡಿಮೆ ಇರುವುದರಿಂದ ಮೋದಿ ಅವರು ಪುರಿ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ವಾರಣಾಸಿ ಕ್ಷೇತ್ರದಿಂದಲೇ ಪುನಃ ಆಯ್ಕೆಯಾಗಲು ಬಯಸಿದ್ದಾರೆ ಎನ್ನಲಾಗಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ಮೋದಿ ಅವರು ಸುಮಾರು ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲುವು ಕಂಡಿದ್ದರು. ರಾಜನಾಥ್ ಸಿಂಗ್ ಲಕ್ನೋದಿಂದ 2.5 ಲಕ್ಷ ಮತಗಳ ಅಂತರದಿಂದ ಗೆಲುವು ಪಡೆದಿದ್ದರು.












Click it and Unblock the Notifications