ನೆನಪಿಡಿ, ಆಧಾರ್ - ಪ್ಯಾನ್ ಜೋಡಣೆಗೆ ಕೊನೆಯ ದಿನಾಂಕ ಜೂನ್ 30
ನವದೆಹಲಿ, ಜೂನ್ 28: ಆದಾಯ ತೆರಿಗೆ ಕಟ್ಟುವವರು ಆಧಾರ್ ಸಂಖ್ಯೆಯನ್ನು ಪ್ಯಾನ್ ಸಂಖ್ಯೆಯೊಂದಿಗೆ ಜೂನ್ 30 ರೊಳಗೆ ಜೋಡಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿರುವ ಕುರಿತಂತೆ ಈಗಾಗಲೇ ದೇಶದಾದ್ಯಂತ ಚರ್ಚೆ ನಡೆದಿದೆ.
ಆದರೆ ತೆರಿಗೆ ವಂಚನೆಯನ್ನು ತಪ್ಪಿಸುವುದಕ್ಕಾಗಿ ತಾನು ಇಂಥ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ಸಮಜಾಯಿಷಿಕೊಟ್ಟುಕೊಂಡಿದ್ದು, ಆಧಾರ್ ನಂಬರ್ ಗೆ ಪ್ಯಾನ್ ನಂಬರ್ ಜೋಡಿಸುವುದರಿಂದ ಕರಗಳ್ಳರಿಗೆ ತಾಪತ್ರಯವಾಗುವುದು ಖಂಡಿತ ಎಂದು ನಂಬಲಾಗಿದೆ.
ಹೀಗಿರುವಾಗ, ಆಧಾರ್ ಸಂಖ್ಯೆಯನ್ನು, ಪ್ಯಾನ್ (Permanent Account Number) ಸಂಖ್ಯೆಯೊಂದಿಗೆ ಜೋಡಿಸುವ ಕುರಿತು ಹಲವರಲ್ಲಿ ಸಂಶಯಗಳೆದ್ದಿದ್ದು, ಆನ್ ಲೈನ್ ನಲ್ಲಿಯೇ ಈ ಎರಡೂ ಸಂಖ್ಯೆಗಳನ್ನು ಜೋಡಿಸುವ ಸೌಲಭ್ಯವೂ ಲಭ್ಯವಾಗಿದೆ. ಆದರೆ ಇನ್ನೆರಡೇ ದಿನಗಳಲ್ಲಿ(ಜೂನ್ 30 ರೊಳಗೆ) ಆಧಾರ್ ಸಂಖ್ಯೆಯನ್ನು ಪ್ಯಾನ್ ಸಂಖ್ಯೆಯೊಂದಿಗೆ ಜೋಡಿಸಿಕೊಳ್ಳದಿದ್ದಲ್ಲಿ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂಬ ಆತಂಕವೂ ಎದುರಾಗಿದೆ.
ಕೇವಲ ತೆರಿಗೆ ಕಟ್ಟುವವರಷ್ಟೇ ಅಲ್ಲದೆ, ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ, ತಮ್ಮ ಆಧಾರ್ ಸಂಖ್ಯೆ ಜೊತೆ ಪ್ಯಾನ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಆಧಾರ್ -ಪ್ಯಾನ್ ಜೋಡಣೆ ಏಕೆ, ಹೇಗೆ ಎಂಬ ಕುರಿತು ಕಿರುಮಾಹಿತಿ ಇಲ್ಲಿದೆ.

ಕಡ್ಡಾಯ ಏಕೆ?
ಭಾರತದ ಅಂದಾಜು 125 ಕೋಟಿ ಜನಸಂಖ್ಯೆಯಲ್ಲಿ 111 ಕೋಟಿ ಜನ ಆಧಾರ್ ಕಾರ್ಡ್ ಹೊಂದಿದ್ದಾರೆ. ಆದರೆ ಪ್ಯಾನ್ ಕಾರ್ಡ್ ಹೊಂದಿರುವವರು ಕೇವಲ 25 ಕೋಟಿ ಜನ ಮಾತ್ರ. ಆದಾಯ ತೆರಿಗೆ ದಾಖಲೆಗಳನ್ನು ಒದಗಿಸುವುದಕ್ಕೆ ಆಧಾರ್ ಕಡ್ಡಾಯವಾಗಿರುವ ಕಾರಣ, ಆದಾಯ ತೆರಿಗೆ ಕಟ್ಟುವ ಪ್ರತಿಯೊಬ್ಬರೂ ತಮ್ಮ ಆಧಾರ್ ಸಂಖ್ಯೆಯನ್ನು ಪ್ಯಾನ್ ಸಂಖ್ಯೆಯೊಂದಿಗೆ ಜೋಡಿಸಲೇಬೇಕಿದೆ.

ತೆರಿಗೆ ವಂಚಕರಿಗೆ ಕಾದಿದೆ ಶಾಸ್ತಿ!
ನಾಲ್ಕೈದು ಪ್ಯಾನ್ ಕಾರ್ಡ್ ಗಳನ್ನು ಹೊಂದಿ ತೆರಿಗೆ ವಂಚನೆ ಮಾಡುವ ವ್ಯವಹಾರವನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆಧಾರ್ ಕಾರ್ಡಿನಲ್ಲಿ ಬೆರಳಚ್ಚು ಇರುವುದರಿಂದ, ಆಧಾರ್ ಸಂಖ್ಯೆಯನ್ನು ಪ್ಯಾನ್ ನೊಂದಿಗೆ ಜೋಡಿಸಿದರೆ ನಾಲ್ಕೈದು ಪ್ಯಾನ್ ಕಾರ್ಡ್ ಇಟ್ಟುಕೊಂಡು ಮೋಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ತೆರಿಗೆ ಕಟ್ಟದವರಿಗೂ ಕಡ್ಡಾಯ
ಆದಾಯ ತೆರಿಗೆ ಕಾಯ್ದೆ 139 AA ಪ್ರಕಾರ, ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಯೂ ಸರ್ಕಾರ ನೀಡಿದ ಗಡುವಿನೊಳಗೆ ತಮ್ಮ ಆದಾರ್ ಸಂಖ್ಯೆಯನ್ನು ಪ್ಯಾನ್ ಸಂಖ್ಯೆಯೊಂದಿಗೆ ಜೋಡಿಸಲೇಬೇಕು. ಇಲ್ಲವಾದಲ್ಲಿ ಪ್ಯಾನ್ ಸಂಖ್ಯೆ ನಿಷ್ಕ್ರಿಯವಾಗುತ್ತದೆ. ಆಧಾರ್ ಕಾರ್ಡ್ ಹೊಂದಿಲ್ಲದಿರುವವರಿಗೆ ವಿನಾಯಿತಿ ನೀಡಲಾಗಿದ್ದರೂ, ಅವರು ಆದಷ್ಟು ಶೀಘ್ರದಲ್ಲಿ ಆಧಾರ್ ಕಾರ್ಡ್ ಮಾಡಿಸುವಂತೆ ಹೇಳಿಲಾಗಿದೆ.

ಜೋಡಣೆ ಹೇಗೆ?
ಆಧಾರ್ ಸಂಖ್ಯೆಯೊಂದಿಗೆ ಪ್ಯಾನ್ ಸಂಖ್ಯೆಯನ್ನು ಜೋಡಿಸುವುದಕ್ಕೆ https://www.incometaxindiaefiling.gov.in/ ವೆಬ್ ಸೈಟ್ ನಲ್ಲಿ, ಲಿಂಕ್ ಆಧಾರ್ ಆಯ್ಕೆಗೆ ಹೋಗಿ, ನಿಮ್ಮ ಆಧಾರ್ ಸಂಖ್ಯೆಯನ್ನು ಪ್ಯಾನ್ ಸಂಖ್ಯೆಯೊಂದಿಗೆ ಜೋಡಿಸಿ. ನಿಮ್ಮ ಆಧಾರ್ ನಂಬರ್, ಪ್ಯಾನ್ ನಂಬರ್ ಗೆ ಲಿಂಕ್ ಆಗುತ್ತಿದ್ದಂತೆಯೇ ವೆಬ್ ಸೈಟಿನ ಸ್ಕ್ರೀನಿನ ಮೇಲೆ your PAN is linked to Aadhaar number ಎಂಬ ಸಂದೇಶ ಬರುತ್ತದೆ. ಅಥವಾ ಆದಾಯ ತೆರಿಗೆ ಇಲಾಖೆಯಸಹಾಯ ವಾಣಿಗಳಾದ 567678 ಅಥವಾ 56161 ಗೆ SMS ಕಳುಹಿಸಬಹುದು.












Click it and Unblock the Notifications