ಅಮೆರಿಕದಲ್ಲಿ ಅಮಿತ್ ಶಾಗೆ ನಿರ್ಬಂಧ ವಿಧಿಸುವ ಒತ್ತಾಯ: ಭಾರತದ ತಿರುಗೇಟು
ನವದೆಹಲಿ, ಡಿಸೆಂಬರ್ 11: ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿರುವ ಗೃಹ ಸಚಿವ ಅಮಿತ್ ಶಾ ಹಾಗೂ ಭಾರತದ ಇತರೆ ಪ್ರಮುಖ ನಾಯಕರ ಮೇಲೆ ದಿಗ್ಬಂಧನ ವಿಧಿಸಬೇಕು ಎಂದು ತನ್ನ ಸರ್ಕಾರವನ್ನು ಒತ್ತಾಯಿಸಿರುವ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ಆಯೋಗಕ್ಕೆ ಭಾರತ ತಿರುಗೇಟು ನೀಡಿದೆ.
ಪೌರತ್ವ ತಿದ್ದುಪಡಿ ಮಸೂದೆ (ಕ್ಯಾಬ್) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗ (ಯುಎಸ್‌ಸಿಐಆರ್‌ಎಫ್), ಈ ಮಸೂದೆಯು ಧರ್ಮದ ಆಧಾರದಲ್ಲಿ ಪೌರತ್ವ ನಿರ್ಧರಿಸುವ ಕಾನೂನಾತ್ಮಕ ಮಾನದಂಡವನ್ನು ಸಿದ್ಧಪಡಿಸುತ್ತಿದೆ. ನಿರ್ದಿಷ್ಟವಾಗಿ ಮುಸ್ಲಿಮರನ್ನು ಹೊರತಾಗಿಸಿ ಇತರೆ ವಲಸಿಗರಿಗೆ ಪೌರತ್ವ ನೀಡಲು ಇದು ದಾರಿ ಮಾಡಿಕೊಡಲಿದೆ ಎಂದು ಆರೋಪಿಸಿತ್ತು.
ಇದು ಅತ್ಯಂತ ಅಪಾಯಕಾರಿ ನಡೆಯಾಗಿದೆ. ಲಕ್ಷಾಂತರ ಮುಸ್ಲಿಂ ನಾಗರಿಕರ ಪೌರತ್ವ ಕಸಿದುಕೊಳ್ಳಲು ಹೊರಟಿದೆ. ಹೀಗಾಗಿ ಅಮಿತ್ ಶಾ ಮತ್ತು ಇತರೆ ಪ್ರಮುಖ ನಾಯಕರ ಮೇಲೆ ನಿರ್ಬಂಧ ವಿಧಿಸುವುದನ್ನು ಪರಿಗಣಿಸಬೇಕು ಎಂದು ಆಯೋಗವು ಅಮೆರಿಕಕ್ಕೆ ಒತ್ತಾಯಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಪತ್ರ ಬರೆದಿರುವ ಭಾರತ, ತೀಕ್ಷ್ಣ ಎದಿರೇಟು ನೀಡಿದೆ.

ಇದು ಒಳ್ಳೆಯ ಉದ್ದೇಶದ ಮಸೂದೆ
ಪೌರತ್ವ ತಿದ್ದುಪಡಿ ಮಸೂದೆ ಕುರಿತಂತೆ ಯುಎಸ್‌ಸಿಐಆರ್ಎಫ್ ನೀಡಿರುವ ಹೇಳಿಕೆ ನಿಖರವಾಗಿಯೂ ಇಲ್ಲ, ಅಗತ್ಯವಾಗಿದ್ದೂ ಅಲ್ಲ. ಇದು ನಿರ್ದಿಷ್ಟ ನೆರೆಯ ದೇಶಗಳಿಂದ ಭಾರತಕ್ಕೆ ಈಗಾಗಲೇ ಬಂದು ನೆಲೆಸಿರುವ ಶೋಷಿತ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವ ಮಸೂದೆಯಾಗಿದೆ. ಈ ಮಸೂದೆಯು ಅವರ ಪ್ರಸ್ತುತದ ಸಮಸ್ಯೆಗಳು ಮತ್ತು ಅವರ ಮೂಲ ಮಾನವಹಕ್ಕುಗಳ ಕುರಿತಾಗಿದೆ. ಇಂತಹ ಯೋಜನೆಯನ್ನು ಸ್ವಾಗತಿಸಬೇಕೇ ಹೊರತು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿಯೇ ಬದ್ಧವಾಗಿರುವವರು ಟೀಕಿಸುವಂತಹದ್ದಲ್ಲ ಎಂದು ಭಾರತ ಹೇಳಿದೆ.

ಪೌರತ್ವ ದಾಖಲೆಗಳೇ ಸಾಕ್ಷಿ
ಪೌರತ್ವ ಪಡೆದುಕೊಳ್ಳುವವರಿಗೆ ಈಗ ಅಸ್ತಿತ್ವದಲ್ಲಿರುವ ಎಲ್ಲಾ ಸಮುದಾಯಗಳ ಸವಲತ್ತುಗಳಿಗೆ 'ಕ್ಯಾಬ್' ತೊಂದರೆಯುಂಟುಮಾಡುವುದಿಲ್ಲ. ಈ ಸಂಬಂಧ ಇತ್ತೀಚೆಗೆ ನೀಡಲಾಗಿರುವ ಅಂತಹ ಪೌರತ್ವದ ದಾಖಲೆಗಳು ಭಾರತ ಸರ್ಕಾರದ ಉದ್ದೇಶಗಳನ್ನು ಪ್ರತಿಬಿಂಬಿಸುತ್ತವೆ ಎಂದು ತಿಳಿಸಿದೆ.

ಎಲ್ಲ ದೇಶಗಳಿಗೂ ಅಧಿಕಾರವಿದೆ
ಕ್ಯಾಬ್ ಆಗಲೀ ಅಥವಾ ಎನ್‌ಆರ್‌ಸಿಯಾಗಲೀ, ಈ ಪ್ರಕ್ರಿಯೆಗಳು ಯಾವುದೇ ಧಾರ್ಮಿಕ ನಂಬಿಕೆ ಹೊಂದಿರುವ ಯಾವುದೇ ಭಾರತೀಯನ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಹೀಗೆ ಆಗುತ್ತದೆ ಎಂದು ಹುಯಿಲು ಎಬ್ಬಿಸುತ್ತಿರುವುದು ಬೇರೆ ವಿಚಾರಗಳಿಂದ ಪ್ರೇರಣೆ ಪಡೆದಿರುವಂಥದ್ದು ಮತ್ತು ಅದು ಅಸಮರ್ಥನೀಯ ವಾದವಾಗಿದೆ. ಅಮೆರಿಕ ಸೇರಿದಂತೆ ಪ್ರತಿಯೊಂದು ದೇಶವೂ ತನ್ನ ನಾಗರಿಕರ ಪಟ್ಟಿಯನ್ನು ಸಿದ್ಧಪಡಿಸುವ ಮತ್ತು ಮೌಲ್ಯೀಕರಿಸುವ ಹಕ್ಕು ಹೊಂದಿರುತ್ತವೆ. ಹಾಗೂ ಈ ವಿಶೇಷಾಧಿಕಾರವನ್ನು ವಿವಿಧ ನೀತಿಗಳ ಮೂಲಕ ನೆರವೇರಿಸುವ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ.

ಅಚ್ಚರಿಯೇನೂ ಆಗಿಲ್ಲ
ಯುಎಸ್‌ಸಿಐಆರ್‌ಎಫ್ ಪ್ರತಿಪಾದಿಸಿರುವ ನಿಲುವು ಅದರ ಹಿಂದಿನ ದಾಖಲೆಗಳನ್ನು ಗಮನಿಸಿದಾಗ ಅಚ್ಚರಿಯೇನೂ ಉಂಟುಮಾಡುವುದಿಲ್ಲ. ಆದರೆ, ಈ ಸಂಸ್ಥೆಯು ಅತ್ಯಲ್ಪ ಜ್ಞಾನದಿಂದ ಹಾಗೂ ಯಾವುದೇ ಅಧಿಕಾರ ಹೊಂದಿಲ್ಲದೆ ಇದ್ದರೂ ಈ ವಿಚಾರದಲ್ಲಿ ಕೇವಲ ತನ್ನ ಪೂರ್ವಗ್ರಹ ಹಾಗೂ ಪಕ್ಷಪಾತಿ ನಿಲುವುಗಳಿಂದ ಸಾಗುತ್ತಿರುವುದು ವಿಷಾದಕರ ಎಂದು ಟೀಕಿಸಿದೆ.












Click it and Unblock the Notifications