ರಜೆಯ ಮಜಾ ಮಾಡಲು ಐಎನ್‌ಎಸ್‌ನಲ್ಲಿ ಹೋಗಿರಲಿಲ್ಲ: ರಾಹುಲ್
Recommended Video
ಬೆಂಗಳೂರು, ಮೇ 10: ನೌಕಾಪಡೆಗೆ ಸೇರಿದ ಐಎನ್‌ಎಸ್ ವಿರಾಟ್ ನೌಕೆಯಲ್ಲಿ ರಾಜೀವ್ ಗಾಂಧಿ ಅವರು ತಮ್ಮ ಕುಟುಂಬ ಕರೆದುಕೊಂಡು ರಜೆ ಕಳೆಯಲು ಹೋಗಿದ್ದರು ಎಂದು ಮೋದಿ ಅವರು ಆರೋಪ ಮಾಡಿದ ಬೆನ್ನಲ್ಲೇ ಭಾರಿ ಚರ್ಚೆ ಪ್ರಾರಂಭವಾಗಿದೆ.
ಪ್ರಧಾನಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ ಅವರು, ಐಎನ್‌ಎಸ್ ನೌಕೆಯಲ್ಲಿ ನಾನು ಒಮ್ಮೆ ತಂದೆಯವರ ಜೊತೆಗೆ ಹೋಗಿದ್ದೆ, ಆದರೆ ರಜೆಗೆ ಮಜಾ ಮಾಡಲೆಂದು ಹೋದದ್ದಲ್ಲ ಎಂದು ಹೇಳಿದ್ದಾರೆ.
ನಾನು ತಂದೆಯ ಜೊತೆ ಐಎಸ್‌ಎಸ್ ವಿರಾಟ್ ಏರಿದ್ದೆ, ಆದರೆ ರಜೆ ಕಳೆಯಲು ಹೋಗಿದ್ದೆವು ಎಂದು ಹೇಳುವುದು ಹುಚ್ಚುತನ ಎಂದು ರಾಹುಲ್ ಅವರು ಕಟುವಾಗಿಯೇ ಮೋದಿ ಅವರಿಗೆ ಪ್ರತಿಕ್ರಿಯಿಸಿದ್ದಾರೆ.

ಮೋದಿ ಅವರ ಟೀಕೆಗೆ ಸಂದರ್ಶನವೊಂದರಲ್ಲಿ ಉತ್ತರಿಸಿರುವ ರಾಹುಲ್, ಐಎನ್‌ಎಸ್ ಅಲ್ಲಿ ರಜೆ ಕಳೆಯುವುದೇ, ಇದು ಹುಚ್ಚತನ, ಯಾರಾದರೂ ಯುದ್ಧ ವಿಮಾನ ನೌಕೆಯಲ್ಲಿ ಮೋಜು ಮಾಡಲು ಸಾಧ್ಯವೇ, ಅದೇನು ಐಶಾರಾಮಿ ಹಡಗೇ? ಎಂದು ಪ್ರಶ್ನೆ ಮಾಡಿದ್ದಾರೆ.
ಸಮಾವೇಶವೊಂದರಲ್ಲಿ ಮಾತನಾಡಿದ್ದ ಮೋದಿ, ರಾಜೀವ್ ಗಾಂಧಿ ವಿದೇಶಿಗರನ್ನು ಐಎನ್‌ಎಸ್ ವಿರಾಟ್ ಒಳಗೆ ಬಿಟ್ಟುಕೊಂಡಿದ್ದರು, ಲಕ್ಷದ್ವೀಪಕ್ಕೆ ರಜೆಗೆ ಮಜಾ ಮಾಡಲು ಕುಟುಂಬವನ್ನು ಹತ್ತು ದಿನ ಕರೆದುಕೊಂಡು ಹೋಗಿದ್ದರು, ಅವರಿಗೆ ದೇಶದ ಭದ್ರತೆಗಿಂತಲೂ ತಮ್ಮ ಮೋಜು ಹೆಚ್ಚಾಗಿತ್ತು ಎಂದು ಟೀಕಿಸಿದ್ದರು.
ಮೋದಿ ಅವರ ಟೀಕೆಗೆ ಕಾಂಗ್ರೆಸ್‌ನಿಂದ ಭಾರಿ ವಿರೋಧ ವ್ಯಕ್ತವಾಗಿತ್ತು, ರಾಜೀವ್ ಗಾಂಧಿ ಅವರು ಖಾಸಗಿ ಬಳಕೆಗೆ ಐಎನ್‌ಎಸ್ ವಿರಾಟ್ ಅನ್ನು ಬಳಸಲಿಲ್ಲ, ಅವರು ಅಧಿಕೃತ ಭೇಟಿಗೆಂದೇ ಐಎನ್‌ಎಸ್ ವಿರಾಟ್ ಅನ್ನು ಬಳಸಿದ್ದರು ಎಂದು ಸ್ಪಷ್ಟನೆ ನೀಡಿದೆ.
ಮೋದಿ ಅವರ ಹೇಳಿಕೆ ಬಳಿಕ, ರಾಜೀವ್ ಗಾಂಧಿ ಅವರು ಅಂದು ಐಎನ್‌ಎಸ್ ವಿರಾಟ್ ಏರಿದ್ದಾಗ ಅದರ ಕ್ಯಾಪ್ಟನ್ ಆಗಿದ್ದ ಹಬೀಬುಲ್ಲಾ ಅವರು ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅಂದು ಯಾವ ವಿದೇಶಿಗರೂ ಐಎನ್‌ಎಸ್ ವಿರಾಟ್ ಏರಿರಲಿಲ್ಲ, ಅದೊಂದು ಅಧಿಕೃತ ಭೇಟಿಯಾಗಿತ್ತು ಎಂದು ಹೇಳಿದ್ದಾರೆ.












Click it and Unblock the Notifications