ಕೊರೊನಾ ಭೀತಿ: ಮತದಾನ ನಿಯಮದಲ್ಲಿ ಮಹತ್ವದ ಬದಲಾವಣೆ
ದೆಹಲಿ, ಜುಲೈ 2: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸದ್ಯಕ್ಕೆ ಈ ಬಿಕ್ಕಟ್ಟು ಕಡಿಮೆಯಾಗುವ ಯಾವುದೇ ಸಾಧ್ಯತೆ ಇಲ್ಲ. ಹೀಗಾಗಿ ಮತದಾನ ನಿಯಮದಲ್ಲಿ ಸರ್ಕಾರವೂ ಮಹತ್ವದ ಬದಲಾವಣೆ ಮಾಡಿದೆ.
Recommended Video

ಕೊರೊನಾ ಭೀತಿ ಹಿನ್ನೆಲೆ ಕೆಲವು ನಿರ್ದಿಷ್ಟ ನಿಯಮಗಳನ್ನು ಸರ್ಕಾರ ಜಾರಿ ಮಾಡಿದ್ದು, ಮುಂಬರುವ ಚುನಾವಣೆಗಳಲ್ಲಿ ಇದು ಅನ್ವಯವಾಗಲಿದೆ ಎಂದು ಸೂಚಿಸಿದೆ.
ಸದ್ಯಕ್ಕೆ ಯಾವುದೇ ಚುನಾವಣೆ ಘೋಷಣೆಯಾಗಿಲ್ಲ. ಆದರೆ, ಬಿಹಾರದಲ್ಲಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಚುನಾವಣೆಗಾಗಿಯೇ ಹೊಸ ನಿಯಮ ಜಾರಿ ಮಾಡಿದೆ. ಅಷ್ಟಕ್ಕೂ, ಏನು ಆ ನಿಯಮಗಳು? ಮುಂದೆ ಓದಿ...

ಅಂಚೆ ಮತದಾನ ವ್ಯಾಪ್ತಿ ವಿಸ್ತರಣೆ
1961ರ ಚುನಾವಣಾ ನಿಯಮಗಳನ್ನು ತಿದ್ದುಪಡಿ ಮಾರುವ ಸರ್ಕಾರ ಮತದಾನ ವ್ಯಾಪ್ತಿಯನ್ನು ವಿಸ್ತರಣೆ ಮಾಡಿದೆ. ಕೊರೊನಾ ವೈರಸ್ ಭೀತಿ ಹಿನ್ನೆಲೆ 65 ವರ್ಷದ ಮೇಲ್ಪಟ್ಟವರು ಅಂಚೆ ಮತಪತ್ರವನ್ನು ಬಳಸಿ ತಮ್ಮ ಮತ ಚಲಾಯಿಸಬಹುದು ಎಂದು ಸರ್ಕಾರ ಆದೇಶಿಸಿದೆ.

ಹೋಮ್ ಕ್ವಾರಂಟೈನ್‌ನಲ್ಲಿದ್ದರೂ ಅಂಚೆ ಮತದಾನ
ಕಾನೂನು ಮತ್ತು ನ್ಯಾಯ ಸಚಿವಾಲಯ ಮತದಾನ ನಿಯಮಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಪ್ರಕಟ ಮಾಡಿದ್ದು, ಕೊರೊನಾ ವೈರಸ್‌ಗೆ ತುತ್ತಾಗಿರುವ ವ್ಯಕ್ತಿ ಕ್ವಾರಂಟೈನ್ ಕೇಂದ್ರ ಅಥವಾ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದರೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಬಹುದು. ಇನ್ನು ಸೋಂಕಿತನ ಸಂಪರ್ಕದಲ್ಲಿದ್ದ ಕಾರಣ ಹೋಮ್ ಕ್ವಾರಂಟೈನ್‌ಗೆ ಒಳಪಡಿಸಿದ್ದರೆ ಅಂತವರೂ ಅಂಚೆ ಪತ್ರದ ಮೂಲಕ ವೋಟ್ ಹಾಕಬಹುದು ಎಂದು ವಿವರಿಸಿದೆ.

ಯೋಧರಿಗೆ ಮತ್ತು ಸಿಬ್ಬಂದಿಗೆ ಮಾತ್ರ ಇತ್ತು
ಇದಕ್ಕೂ ಮುಂಚೆ ಅಂಚೆ ಪತ್ರದ ಮೂಲಕ ಮತದಾನ ಮಾಡುವ ಹಕ್ಕು ಗಡಿಕಾಯುವ ಯೋಧರಿಗೆ ಮತ್ತು ಚುನಾವಣೆ ಕಾರ್ಯನಿರತರಾಗಿದ್ದ ಸಿಬ್ಬಂದಿಗಳಿಗೆ ಮಾತ್ರ ಅವಕಾಶ ಇತ್ತು. ಇದೀಗ, ಚುನಾವಣಾ ನಿಯಮವನ್ನು ಸರ್ಕಾರ ತಿದ್ದುಪಡಿ ಮಾಡಿದ್ದು, ಕೊರೊನಾ ಹಿನ್ನೆಲೆ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೂ ಈ ನಿಯಮ ಸೇರಿಸಿದೆ.

ದೆಹಲಿ ಪ್ರಯೋಗ ಮಾಡಲಾಗಿತ್ತು
ಇದಕ್ಕೂ ಮುಂಚೆ ದೆಹಲಿಯಲ್ಲಿ ಇಂತಹದೊಂದು ಪ್ರಯೋಗ ಮಾಡಲಾಗಿತ್ತು. ತೀವ್ರ ವಿಕಲಾಂಗಚೇತನ ಅಥವಾ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಪತ್ರದ ಮತದಾನಕ್ಕೆ ಫೆಬ್ರವರಿ ತಿಂಗಳಲ್ಲಿ ದೆಹಲಿ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಕೊರೊನಾ ಬಿಕ್ಕಟ್ಟಿನ ನಡುವೆ ರಾಜ್ಯಸಭೆ ಚುನಾವಣೆ ನಡೆದಿದ್ದು, ಈ ವೇಳೆ ಸೋಂಕಿತ ಶಾಸಕರು ಪಿಪಿಇ ಕಿಟ್ ಧರಿಸಿ ಸದನಕ್ಕೆ ಬಂದ ಮತದಾನ ಮಾಡಿದ್ದನ್ನು ಸ್ಮರಿಸಬಹುದು.












Click it and Unblock the Notifications