10 ಅಡಿಯ ದೋಸೆ ತಿಂದರೆ 71,000 ರೂ. ಬಹುಮಾನ ಜೇಬಿಗೆ!
ನವದೆಹಲಿ, ಫೆಬ್ರವರಿ 03; ಗರಿ ಗರಿ ದೋಸೆ ಮುರಿಯುವ ದೋಸೆ ಪ್ರಿಯರಿಗೆ ಇಲ್ಲೊಂದು ಸವಾಲು ಇದೆ. 10 ಅಡಿಯ ದೋಸೆಯನ್ನು ತಿಂದರೆ ಹೊಟ್ಟೆ ತುಂಬಿಸಿಕೊಳ್ಳುವ ಜೊತೆಗೆ 71 ಸಾವಿರ ರೂ. ಬಹುಮಾನವನ್ನು ಜೇಬಿಗೆ ಇಳಿಸಬಹುದು.
ಹೌದು, ದೆಹಲಿಯ ಉತ್ತಮ ನಗರದ ಹೋಟೆಲ್ ಒಂದು ದೋಸೆ ಇಷ್ಟ ಪಡುವ ಜನರ ಮುಂದೆ ಇಂತಹ ಸವಾಲು ಇಟ್ಟಿದೆ. 40 ನಿಮಿಷಗಳಲ್ಲಿ 10 ಅಡಿ ದೋಸೆ ತಿಂದು ಮುಗಿಸಿದರೆ ಹಣ ಬಹುಮಾನವಾಗಿ ಸಿಗಲಿದೆ.
ಸ್ವಾಮಿ ಶಕ್ತಿ ಸಾಗರ್ ಹೋಟೆಲ್‌ನಲ್ಲಿ ಸಿಗುವ ಈ ದೋಸೆಯ ಬೆಲೆ 1,500 ರೂ.ಗಳು ಇದುವರೆಗೂ 26 ಜನರು ಸವಾಲು ಸ್ವೀಕರಿಸಿ ದೋಸೆಗೆ ಕೈ ಹಾಕಿ ಸೋತು ಸುಣ್ಣವಾಗಿದ್ದಾರೆ. 40 ನಿಮಿಷಲ್ಲಿ ದೋಸೆ ತಿನ್ನಲಾಗದೇ ಬಿಲ್ ಕೊಟ್ಟು ಮನೆ ದಾರಿ ಹಿಡಿದಿದ್ದಾರೆ.

ಹೋಟೆಲ್ ಮಾಲೀಕ ಶೇಖರ್ ಕುಮಾರ್ ಈ ಕುರಿತು ಮಾತನಾಡಿದ್ದಾರೆ, "10 ಅಡಿ ದೋಸೆ ತಿನ್ನುವ ಸ್ಪರ್ಧೆಯನ್ನು ನಮ್ಮ ಹೋಟೆಲ್‌ನಲ್ಲಿ ನಡೆಸಲಾಗುತ್ತಿದೆ. ಒಬ್ಬ ವ್ಯಕ್ತಿ 40 ನಿಮಿಷದಲ್ಲಿ ಸಂಪೂರ್ಣ ದೋಸೆ ತಿಂದರೆ 71 ಸಾವಿರ ರೂ. ನಗದು ಬಹುಮಾನ ನೀಡುತ್ತೇವೆ" ಎಂದು ಹೇಳಿದ್ದಾರೆ.
10 ಅಡಿ ಉದ್ದದ ದೋಸೆ ಮಾಡುವುದಕ್ಕೆ ಬೇಕಾದ ಕಾವಲಿ ವ್ಯವಸ್ಥೆಯನ್ನು ಮಾಡಿಕೊಂಡ ಬಳಿಕ ಸ್ವಾಮಿ ಶಕ್ತಿ ಸಾಗರ್ ಹೋಟೆಲ್ ಜನರ ಮುಂದೆ ಈ ಸವಾಲು ಹಾಕಿದೆ. "5, 6, 8 ಅಡಿ ದೋಸೆ ಮಾಮೂಲು ನಾವು ವಿಭಿನ್ನವಾಗಿ ಆಲೋಚಿಸಿ 10 ಅಡಿ ದೋಸೆ ಮಾಡಿದೆವು" ಎನ್ನುತ್ತಾರೆ ಮಾಲೀಕರು.
10 ಅಡಿ 4 ಇಂಚು ಅಗಲದ ಕಾವಲಿಯನ್ನು ಸಿದ್ಧಪಡಿಸಲಾಗಿದೆ. ಕಾವಲಿ ಕಾದಿದ್ದರೆ 7 ರಿಂದ 8 ನಿಮಿಷದಲ್ಲಿ 10 ಅಡಿ ದೋಸೆ ಸಿದ್ಧವಾಗುತ್ತದೆ. ಒಂದು ತಿಂಗಳಿನಿಂದ ಈ ಚಾಲೆಂಜ್ ಆರಂಭ ಮಾಡಿದ್ದು 26 ಜನರು ಸವಾಲು ಸ್ವೀಕಾರ ಮಾಡಿದ್ದಾರೆ. ಆದರೆ ಯಾರೂ ಸಹ ಗೆದ್ದಿಲ್ಲ.
Delhi | An eatery in Uttam Nagar offering Rs 71,000 to finish 10ft long dosa in 40 mins
— ANI (@ANI) February 2, 2022
10 ft long dosa challenge is running at our restaurant. We're receiving calls from everywhere to participate. 25-26 people have taken up this challenge, no one could win: Owner of restaurant pic.twitter.com/t8hgZjpBR8
ದೋಸೆ ಚಾಲೆಂಜ್ ಬಗ್ಗೆ ತಿಳಿಯಲು ದೆಹಲಿಯ ವಿವಿಧ ಪ್ರದೇಶಗಳಿಂದ ಕರೆಗಳು ಬರುತ್ತಿವೆ. ಆದರೆ ಸವಾಲು ಸ್ವೀಕಾರ ಮಾಡಿ ಬಂದವರು ದೋಸೆ ಮುರಿಯುವುದರಲ್ಲಿ ಸೋತು ಹೋಗಿದ್ದಾರೆ.
ಸುರೇಂದ್ರ ಗುಪ್ತ ಎನ್ನುವವರು ಸ್ವಾಮಿ ಶಕ್ತಿ ಸಾಗರ್ ಹೋಟೆಲ್‌ಗೆ ಸುಮಾರು 10 ವರ್ಷದಿಂದ ಬರುತ್ತಿದ್ದಾರೆ. ದೋಸೆ ಚಾಲೆಂಜ್ ಬಗ್ಗೆ ತಿಳಿದ ಅವರು ಸವಾಲು ಸ್ವೀಕಾರ ಮಾಡಿದರು. ಆದರೆ ಪೂರ್ಣ ದೋಸೆ ತಿನ್ನಲಾಗಲಿಲ್ಲ. ಇನ್ನೊಮ್ಮೆ ಸವಾಲು ಸ್ವೀಕಾರ ಮಾಡುವ ಹುಮ್ಮಸ್ಸು ಅವರಲ್ಲಿದೆ.
ಪೂನಂ ಗುಪ್ತ ಸಹ 1,500 ರೂ. ಕೊಟ್ಟು 10 ಅಡಿ ದೋಸೆ ತಿನ್ನುವ ಚಾಲೆಂಜ್ ಸ್ವೀಕಾರ ಮಾಡಿದ್ದರು. ಆದರೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಕುಟುಂಬ ಸದಸ್ಯರೆಲ್ಲರೂ ಸೇರಿ ತಿಂದು ಮುಗಿಸಿ ಸೋಲೊಪ್ಪಿಕೊಂಡರು.
10 ಅಡಿ ದೋಸೆಯ ಜೊತೆ ಸ್ವಾಮಿ ಶಕ್ತಿ ಸಾಗರ್ ಹೋಟೆಲ್ ಚಟ್ನಿ, ಪಲ್ಯ, ಸಾಂಬಾರ್ ಸೇರಿದಂತೆ ದೋಸೆ ಮುರಿಯಲು ಅಗತ್ಯ ವ್ಯವಸ್ಥೆ ನೀಡುತ್ತದೆ. ದೋಸೆ ಮುಂದೆ ಸಾಲು ಸಾಲು ಕಪ್‌ಗಳಲ್ಲಿ ಇವುಗಳನ್ನು ನೀಡಲಾಗುತ್ತದೆ. 40 ನಿಮಿಷದಲ್ಲಿ ತಿಂದು ಮುಗಿಸುವುದು ಮಾತ್ರ ನಿಮ್ಮ ಕೆಲಸ.












Click it and Unblock the Notifications