ದೆಹಲಿ, ಹರಿಯಾಣ ಯುಪಿಯಲ್ಲಿ ಕೋವಿಡ್ ಸೋಂಕು ಅಬ್ಬರ
ನವದೆಹಲಿ, ಏಪ್ರಿಲ್ 18: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿರುವ ಏ.17 ಮತ್ತು 18ರ ವರದಿಗಳನ್ನು ನೋಡಿದಾಗ ಕೋವಿಡ್ ಪ್ರಕಣಗಳು ಎರಡು ಪಟ್ಟು ಹೆಚ್ಚಾಗಿವೆ.
ಉತ್ತರ ಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ಶೇ. 35ರಷ್ಟು ಕೋರಾನಾವೈರಸ್ ಸೋಂಕು ಹೆಚ್ಚಾಗಿದೆ. ನೆರೆಯ ರಾಜ್ಯಗಳಾದ ದೆಹಲಿ ಹಾಗೂ ಹರಿಯಾಣಗಳಲ್ಲಿ ಕೋವಿಡ್ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಕಳೆದ ಏಪ್ರಿಲ್ 11ರಿಂದ 17ರ ನಡುವೆ ಈ ಒಂದು ವಾರದಲ್ಲಿ ದೇಶದಲ್ಲಿ 6,610 ಹೊಸ ಪ್ರಕರಣಗಳು ದಾಖಲಾಗಿದ್ದು ಮತ್ತು ದೇಶದಲ್ಲಿ ನಾಲ್ಕನೇ ಅಲೆಯು ಕಾಡಲಿದೆ ಎಂಬುವುದು ಈ ಹೊಸ ಪ್ರಕರಣಗಳಿಂದ ಬಹಿರಂಗವಾಗಿದೆ.

ಇನ್ನು ಕೇರಳ ರಾಜ್ಯದಲ್ಲಿ ಕೂಡ ಕಳೆದ ಒಂದು ವಾರದಿಂದ ಪ್ರಕರಣಗಳನ್ನು ಗಮನಿಸಿದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಲ್ಲಿ ಒಟ್ಟು 2,185 ಪ್ರಕರಣಗಳು ಪತ್ತೆಯಾಗಿದ್ದವು. ಇಡೀ ದೇಶದಲ್ಲಿ ವರದಿಯಾದ ಕೋವಿಡ್ ಪ್ರಕರಣಗಳಲ್ಲಿ ಕೇರಳ ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ಸಾವಿನ ಪ್ರಕರಣಗಳು ಕೂಡ ಹೆಚ್ಚಾಗುತ್ತಿದ್ದು ಕಳೆದ ಎರಡು ವಾರಗಳ ಅವಧಿಯಲ್ಲಿ 54 ಹೆಚ್ಚು ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ರಾಷ್ಟ್ರದ ರಾಜಧಾನಿ ದೆಹಲಿಯಲ್ಲೂ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಡಬಲ್ ಆಗುತ್ತಿದ್ದು ಕಳೆದ ವಾರದ ಹಿಂದಿನ ಪ್ರಕರಣಗಳನ್ನು ಗಮನಿಸಿದರೆ ಒಟ್ಟು 2,307 ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಶೇ.145% ರಷ್ಟು ವೇಗವಾಗಿ ದೆಹಲಿಯಲ್ಲಿ ಕೋರೊನಾ ವೈರಸ್ ಪ್ರಕರಣ ಹರಡುತ್ತಿದೆ ಎಂದು ವರದಿಯಾಗಿದೆ. ಹರಿಯಾಣ ರಾಜ್ಯದಲ್ಲಿ ಕಳೆದ ವಾರದಲ್ಲಿ ಪತ್ತೆಯಾಗಿರುವ ಪ್ರಕರಣಗಳು ಹೆಚ್ಚಾಗಿದ್ದು ಒಟ್ಟು 1,119 ಕೋವಿಡ್ ಪ್ರಕರಣಗಳು ಕಳೆದ ಒಂದು ವಾರದಿಂದ ವರದಿಯಾಗಿವೆ, ಶೇ.141ರಷ್ಟು ಪ್ರಕರಣಗಳು ಏರಿಕೆ ಕಂಡಿದ್ದು ಹರಿಯಾಣ ರಾಜ್ಯದ ಪಕ್ಕದಲ್ಲಿ ಹೊಂದಿಕೊಂಡಿರುವ ದೆಹಲಿ, ದೆಹಲಿಯ ಎನ್‌ಸಿಆರ್ ನಗರಗಳು ನೋಯ್ಡಾ ಹಾಗೂ ಗಾಜಿಯಾಬಾದ್ ನಗರಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ವರದಿಯಾಗುತ್ತಿರುವುದು ಮತ್ತೆ ಮಹಾನಗರಗಳಲ್ಲಿ ಲಾಕ್‌ಡೌನ್ ಪರಿಸ್ಥಿತಿಯನ್ನು ಎದುರು ನೋಡಬೇಕಾಗುತ್ತಾ ಎಂಬುವುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications