ಆಂಧ್ರ, ಅರುಣಾಚಲ ವಿಧಾನಸಭಾ ಅಭ್ಯರ್ಥಿಗಳ ಘೋಷಣೆ ಮಾಡಿದ ಬಿಜೆಪಿ
ನವದೆಹಲಿ, ಮಾರ್ಚ್ 17: ಭಾರತೀಯ ಜನತಾ ಪಕ್ಷ (ಬಿಜೆಪಿ) ಆಂಧ್ರಪ್ರದೇಶ ಹಾಗೂ ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಗಾಗಿ ಒಟ್ಟು 177 ಅಭ್ಯರ್ಥಿಗಳ ಹೆಸರನ್ನು ಭಾನುವಾರ ಘೋಷಣೆ ಮಾಡಿದೆ. ಆಂಧ್ರಪ್ರದೇಶ ವಿಧಾನಸಭೆಯಲ್ಲಿ 175 ಸ್ಥಾನಗಳಿದ್ದು, ಅದರಲ್ಲಿ 123ಕ್ಕೆ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ.
ಅರುಣಾಚಲ ಪ್ರದೇಶದಲ್ಲಿ ಒಟ್ಟು 60 ಸದಸ್ಯತ್ವ ಬಲದ ವಿಧಾನಸಭೆಗೆ 54 ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆಂಧ್ರಪ್ರದೇಶ ಹಾಗೂ ಅರುಣಾಚಲಪ್ರದೇಶಕ್ಕೆ ವಿಧಾನಸಭಾ ಚುನಾವಣೆಯು ಲೋಕಸಭೆ ಚುನಾವಣೆ ಜತೆಗೆ ಏಪ್ರಿಲ್ 11ನೇ ತಾರೀಕಿನಂದು ನಡೆಯಲಿದೆ.

ಈ ಎರಡು ರಾಜ್ಯಗಳ ಪೈಕಿ ವಿಧಾನಸಭೆಗೆ ಸ್ಪರ್ಧಿಸಲಿರುವ ಅತಿ ಮುಖ್ಯ ಅಭ್ಯರ್ಥಿ ಎಂದು ಅರುಣಾಚಲ ಪ್ರದೇಶದ ಹಾಲಿ ಮುಖ್ಯಮಂತ್ರಿ ಪೇಮಾ ಖಂಡು ಅವರನ್ನು ಪರಿಗಣಿಸಲಾಗಿದ್ದು, ಮುಕ್ತೋ ವಿಧಾನಸಭಾ ಕ್ಷೇತ್ರದಿಂದ ಕೇಸರಿ ಪಕ್ಷದ ಪರವಾಗಿ ಅಖಾಡಕ್ಕೆ ಇಳಿಯಲಿದ್ದಾರೆ. ಏಪ್ರಿಲ್ ಹನ್ನೊಂದರಿಂದ ಏಳು ಹಂತದಲ್ಲಿ ಲೋಕಸಭೆ ಚುನಾವಣೆ ದೇಶದಾದ್ಯಂತ ನಡೆಯಲಿದೆ. ಮೇ ಇಪ್ಪತ್ಮೂರರಂದು ಫಲಿತಾಂಶ ಬರಲಿದೆ.












Click it and Unblock the Notifications