ಕಾರಿನಲ್ಲೇ ಸಚಿವ ಸಂಪುಟ ಸಭೆ ಆರಂಭಿಸಿದ ಕೇಜ್ರಿವಾಲ್
ನವದೆಹಲಿ, ಜ.21 : ವ್ಯಭಿಚಾರ ಮತ್ತು ಮಾದಕ ದ್ರವ್ಯ ಜಾಲದ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಮತ್ತು ದಿಲ್ಲಿ ಪೊಲೀಸ್ ಇಲಾಖೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ ವಹಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ನಡೆಸುತ್ತಿರುವ ಧರಣಿ 2ನೇ ದಿನಕ್ಕೆ ಕಾಲಿಟ್ಟಿದೆ.
ನವದೆಹಲಿಯ ರೈಲು ಭವನದ ಮುಂದೆ ಸೋಮವಾರದಿಂದ ಧರಣಿ ಆರಂಭಿಸಿರುವ ಸಿಎಂ ಅರವಿಂದ್ ಕೇಜ್ರಿವಾಲ್, ಮಂಗಳವಾರವೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಧರಣಿಯನ್ನು ಮುಂದುವರೆಸಿದ್ದಾರೆ. ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ದೆಹಲಿ ಪೊಲೀಸ್ ಆಯುಕ್ತರ ಜೊತೆ ನಡೆಸಿದ ಮಾತುಕತೆ ಪೂರ್ಣಗೊಂಡಿದ್ದು, ಮೂವರು ಅಧಿಕಾರಿಗಳನ್ನು ಅಮಾನತುಮಾಡಲು ಅವರು ನಿರಾಕರಿಸಿದ್ದಾರೆ.
ಸಮಯ 6.10 : ದೆಹಲಿ ಸರ್ಕಾರವನ್ನು ರಾಷ್ಟ್ರಪತಿ ವಜಾಗೊಳಿಸಲಿ ಕಿರಣ್ ಬೇಡಿ ಟ್ವಿಟ್, ಆಪ್ ವಿರುದ್ಧ ಅಸಮಾಧಾನ
Elected Government which practices and promotes anarchy ought to be dismissed by the President of India without further loss of time!
— Kiran Bedi (@thekiranbedi) January 21, 2014
ಸಮಯ 5.45 : ರೈಲ್ವೆ ಭವನ ಪ್ರವೇಶಕ್ಕೆ ಯತ್ನಿಸಿದ ಸಿಎಂ ಅರವಿಂದ್ ಕೇಜ್ರಿವಾಲ್ ತಡೆದ ಪೊಲೀಸರು. ದೆಹಲಿ ಪ್ರೆಸ್ ಕ್ಲಬ್ ನಲ್ಲಿ ಆಪ್ ನಾಯಕರ ಸಭೆ ಆರಂಭ
ಸಮಯ 5.30 : ಪ್ರತಿಭಟನಾ ಸ್ಥಳದಲ್ಲಿ ವ್ಯಾಗನಾರ್ ಕಾರಿನಲ್ಲೇ ಸಚಿವ ಸಂಪುಟ ಸಭೆ ಆರಂಭಿಸಿದ ಸಿಎಂ ಅರವಿಂದ್ ಕೇಜ್ರಿವಾಲ್.
ಸಮಯ 5.15 : ಆಮ್ ಆದ್ಮಿ ಪ್ರತಿಭಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್, ಪಕ್ಷಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಪ್ರಕಟ ಎಂದ ಪಕ್ಷದ ನಾಯಕರು, ಅರವಿಂದ್ ಕೇಜ್ರಿವಾಲ್ ಸರ್ಕಾರ ಬೆಂಬಲ ಕಳೆದುಕೊಳ್ಳುತ್ತಾ?
ಸಮಯ 4.45 : ದೆಹಲಿಯಲ್ಲಿ ಪೊಲೀಸ್, ಆಪ್ ಕಾರ್ಯಕರ್ತರ ನಡುವೆ ಜಟಾಪಟಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆಯನ್ನು ಭೇಟಿ ಮಾಡಿದ ದೆಹಲಿ ಪೊಲೀಸ್ ಆಯುಕ್ತ.
ಸಮಯ 4 ಗಂಟೆ : ಸಿಎಂ ಕೇಜ್ರಿವಾಲ್ ಪ್ರತಿಭಟನೆಗೆ ಇಳಿದ್ದರು ತಪ್ಪು ಎಂದು ಕ್ಯಾ.ಗೋಪಿನಾಥ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಆಮ್ ಆದ್ಮಿ ಪಕ್ಷ ಸೇರಿದ ಅವರು ಅರವಿಂದ್ ಕೇಜ್ರಿವಾಲ್ ಪ್ರತಿಭಟನೆ ಬಗ್ಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಿಎಂ ಮತ್ತು ಸಚಿವರು ಕಾರ್ಯ ನಿರ್ವಹಿಸಲಿ, ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲಿ ಎಂದು ಹೇಳಿದ್ದಾರೆ. ಪ್ರತಿಭಟನೆಯ ಸ್ಥಳವನ್ನು ತೆರವುಗೊಳಿಸಬೇಕು ಎಂದು ಕ್ಯಾ.ಗೋಪಿನಾಥ್ ಸಲಹೆ ನೀಡಿದ್ದಾರೆ.
ಸಮಯ 3.30 : ಪ್ರತಿಭಟನಾ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿದೆ. ಘರ್ಷಣೆಯಿಂದಾಗಿ ಹಲವಾರು ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಸಮಯ 2.35 : ಅರವಿಂದ್ ಕೇಜ್ರಿವಾಲ್ ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದಿದೆ. ಆಮ್ ಆದ್ಮಿ ಪಕ್ಷ ಕಾರ್ಯಕರ್ತರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದು, ಇದರಿಂದಾಗಿ ಒಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಮನೀಶ್ ಸಿಸೋಡಿಯಾ ಜನರನ್ನು ಉದ್ದೇಶಿಸಿ ಮಾತನಾಡಲು ಯತ್ನಿಸಿದ್ದು ಅದಕ್ಕೆ ಪೊಲೀಸರು ಅಡ್ಡಿ ಪಡಿಸಿದ್ದಾರೆ.
ಸಮಯ 2 ಗಂಟೆ : ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ಆರಂಭಿಸಿದೆ. ಪಕ್ಷದ ನಾಯಕ ವಿಜಯ್ ಘೋಯಲ್ ಸೇರಿದಂತೆ 200 ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸಿಎಂ ಕೇಜ್ರಿವಾಲ್ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.
ಸಮಯ 1 ಗಂಟೆ : ರೈಲ್ವೆ ಭವನದ ಮುಂದೆ ಧ್ವನಿ ವರ್ಧಕ ಬಳಕೆಗೆ ಆಕ್ಷೇಪ ಪೊಲೀಸರು ಮತ್ತು ಆಮ್ ಕಾರ್ಯಕರ್ತರ ನಡುವೆ ವಾಗ್ವಾದ. ಪೊಲೀಸರ ಮನವಿ ಸ್ಪಂದಿಸದ ಪಕ್ಷದ ಕಾರ್ಯಕರ್ತರು. ಪೊಲೀಸರು ವಿರುದ್ಧ ಪಕ್ಷದ ಕಾರ್ಯಕರ್ತರ ಗೂಂಡಾ ವರ್ತನೆ.
ಸಮಯ 12.15 : ಅರವಿಂದ್ ಕೇಜ್ರಿವಾಲ್ ಧರಣಿ ಕುರಿತು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮತ್ತು ದೆಹಲಿ ಪೊಲೀಸ್ ಆಯುಕ್ತರ ನಡುವೆ ನಡೆದ ಮಾತುಕತೆ ಅಂತ್ಯ. ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಮಂಗಳವಾರ ಧರಣಿ ಸ್ಥಳಕ್ಕೆ ಹೆಚ್ಚು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬಂದು ಸೇರಿಕೊಂಡಿದ್ದಾರೆ.
ಸಮಯ 11.30 : ಎರಡು ದಿನದಿಂದ ಧರಣಿ ನಡೆಸುತ್ತಿರುವ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಸಿಎಂ ಇಂತಹ ಧರಣಿ ನಡೆಸುವ ಮೊದಲು ಗೌರ್ನರ್ ಅಥವ ಲೆಫ್ಟಿನೆಂಟ್ ಗೌರ್ನರ್ ಅವರಿಗೆ ಮಾಹಿತಿ ನೀಡಬೇಕು ಆದರೆ, ಕೇಜ್ರಿವಾಲ್ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ. ಸಿಎಂ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅರ್ಜಿಯ ವಿಚಾರಣೆ ನಡೆಸಲು ಕೋರ್ಟ್ ಒಪ್ಪಿಗೆ ನೀಡಿದೆ.