ರಫೆಲ್ ಡೀಲ್: ಕಾಂಗ್ರೆಸ್ಸಿಗೆ ರಿಲಯನ್ಸ್ ನಿಂದ ಖಡಕ್ ವಾರ್ನಿಂಗ್
ನವದೆಹಲಿ, ಆಗಸ್ಟ್ 22: ಬೀದಿಲಿ ಹೋಗೋ ಮಾರಿನಾ ಮನೆಗೆ ಭರಮಾಡಿಕೊಂಡ ಹಾಗಾಗಿದೆ ಕಾಂಗ್ರೆಸ್ ಕತೆ!
ಫ್ರಾನ್ಸ್ ನೊಂಡಿಗೆ ಭಾರತ ಮಾಡಿಕೊಂಡಿರುವ ರಫೆಲ್ ಫೈಟರ್ ಜೆಟ್ ವಿಮಾನ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಬಿಜೆಪಿ ಸರ್ಕಾರವನ್ನು ದೂರಿದ್ದ ಕಾಂಗ್ರೆಸ್, ದೂರುವ ಅವಸರದಲ್ಲಿ ರಿಲಯನ್ಸ್ ಗ್ರೂಪ್ ನ ಅನಿಲ್ ಅಂಬಾನಿ ಅವರ ಹೆಸರನ್ನೂ ಅವ್ವಹಾರದಲ್ಲಿ ಎಳೆದು ತಂದಿತ್ತು!
ಇದರಿಂದ ಅಸಮಾಧಾನಗೊಂಡ ರಿಲಯನ್ಸ್ ಕಾಂಗ್ರೆಸ್ಸಿಗೆ ನೋಟೀಸ್ ನೀಡಿದೆ. ರಫೆಲ್ ಡಿಲ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ, ಬೇಕಾಬಿಟ್ಟಿ ಮಾತನಾಡಿದರೆ ಪರಿಣಾಮ ನೆಟ್ಟಗಿರೋಲ್ಲ ಎಂದು ಖಡಕ್ ವಾರ್ನಿಂಗ್ ಸಹ ನೀಡಿದೆ!
|
ಅಸಂಬದ್ಧ ಮಾತನಾಡುವ ಮುನ್ನ ಎಚ್ಚರವಿರಲಿ!
"ರಾಜಕಾರಣಿಗಳಿಗೆ ಮಾತನಾಡುವ ಹಕ್ಕಿದೆ ಎಂದ ಮಾತ್ರಕ್ಕೆ ಅವರು ಬೇಜವಬ್ದಾರಿಯಾಗಿ ಹೇಳಿಕೆ ನೀಡಬಹದು ಎಂದು ಎಲ್ಲಿಯೂ ಬರೆದಿಲ್ಲ! ಬೇಕಾಬಿಟ್ಟಿ ಮಾತನಾಡುವುದು, ಅಸಂಬದ್ಧ ಹೇಳಿಕೆ ನೀಡುವುದು, ಮಿಥ್ಯಾರೋಪ ಮಾಡುವುದು ಇವೆಲ್ಲವನ್ನೂ ನಾವು ಸಹಿಸೋಲ್ಲ. ಇಂಥ ಕೆಲಸ ಮಾಡಿದರೆ ಕಾನೂನಾತ್ಮಕ ಕ್ರಮ ಎದುರಿಸಬೇಕಾಗುತ್ತದೆ" ಎಂದು ರಿಲಯನ್ಸ್ ಗ್ರೂಪ್ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಅವರಿಗೆ ನೋಟೀಸ್ ನೀಡಿದೆ.

ರಾಜಕೀಯ ಹಿತಾಸಕ್ತಿಗೆ ನಮ್ಮ ಹೆಸರನ್ನು ಬಳಸಬೇಡಿ!
"ಕಾಂಗ್ರೆಸ್ಸಿಗೆ ನೋಟೀಸ್ ನೀಡಿರುವ ರಿಲಯನ್ಸ್, ನಿಮ್ಮ ರಾಜಕೀಯ ಹಿತಾಸಕ್ತಿಗಾಗಿ ನಮ್ಮ ಹೆಸರನ್ನು ಬಳಸಿಕೊಳ್ಳಬೇಡಿ" ಎಂದು ಸ್ಪಷ್ಟವಾಗಿ ಹೇಳಿದೆ. ಕಾಂಗ್ರೆಸ್ ಮುಖಂಡರಾದ ಜೈವೀರ್ ಶೆರ್ಗಿಲ್, ರಣದೀಪ್ ಸುರ್ಜೇವಾಲಾ, ಅಶೋಕ್ ಚಾವಣ್, ಸಂಜಯ್ ನಿರುಪಮ್, ಅನುರಾಗ್ ನಾರಾಯಣ ಸಿಂಗ್, ಓಮನ್ ಚಾಂಡಿ, ಶಕ್ತಿ ಸಿನ್ಹಾ ಗೋಹಿಲ್, ಅಭಿಷೇಕ್ ಮನು ಸಿಂಘ್ವಿ, ಸುನಿಲ್ ಕುಮಾರ್ ಜಾಖರ್ ಮತ್ತು ಪ್ರಿಯಾಂಕಾ ಚತುರ್ವೇದಿ ಅವರಿಗೂ ರಿಲಯನ್ಸ್ ಖಡಕ್ ಎಚ್ಚರಿಕೆ ನೀಡಿದೆ!

ರಾಹುಲ್ ಗಾಂಧಿಗೆ ಪತ್ರ ಬರೆದಿದ್ದ ಅನಿಲ್ ಅಂಬಾನಿ
ಇದಕ್ಕೂ ಮುನ್ನ ಅನಿಲ್ ಅಂಬಾನಿ ಅವರು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು, ರಫೆಲ್ ಡೀಲ್ ನಲ್ಲಿ ರಿಲಯನ್ಸ್ ಹೆಸರನ್ನು ಉಲ್ಲೇಖಿಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಫ್ರಾನ್ಸ್ ನಿಂದ ಭಾರತ ಖರೀದಿಸುತ್ತಿರುವ ರಫೆಲ್ ಫೈಟರ್ ಜೆಟ್ ಗೆ ರಿಲಯನ್ಸ್ ಕಂಪನಿಯ ಕಡೆಯಿಂದ ಒಂದೇ ಒಂದು ರೂಪಾಯಿ ಮೌಲ್ಯದ ಕಾಂಪೋನೆಂಟ್ ಅನ್ನೂ ಉತ್ಪಾದಿಸಲಾಗಿಲ್ಲ. ಭಾರತೀಯ ರಕ್ಷಣಾ ಉತ್ಪಾದನಾ ಕ್ಷೇತ್ರಕ್ಕೆ ರಿಲಯನ್ಸ್ ಕೊಡುಗೆ ನೀಡುವ ಬಗ್ಗೆ 2014-2015 ರಲ್ಲೇ ಕಂಪನಿ ಘೋಷಣೆ ಮಾಡಿತ್ತು. ಇದಕ್ಕೂ ರಫೆಲ್ ಖರೀದಿಗೂ ಸಂಬಂಧವಿಲ್ಲ ಎಂದು ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದರು.

ಕಾಂಗ್ರೆಸ್ ಸಮಜಾಯಿಷಿ
ರಿಲಯನ್ಸ್ ನಿಂದ ಬಂದಿರುವ ನೋಟೀಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ಜೈವೀರ್ ಶೆರ್ಗಿಲ್, 'ನನ್ನ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅನಿಲ್ ಅಂಬಾನಿ ಅವರು ನೀಡಿದ ನೋಟೀಸ್ ಸಿಕ್ಕಿದೆ. ರಫೆಲ್ ಡೀಲ್ ಬಗ್ಗೆ ನಾನು ಮಾತನಾಡುವಾಗ ಸಂಪೂರ್ಣ ಮಾಹಿತಿ ಕಲೆಹಾಕಿಯೇ ಮಾತನಾಡುತ್ತಿದ್ದೇನೆ. ನಾನೊಬ್ಬ ಕಾಂಗ್ರೆಸ್ ಸೈನಿಕ. ಹೆಮ್ಮೆಯ ಪಂಜಾಬಿ. ಇಂಥ ನೋಟೀಸ್ ಗೆಲ್ಲ ನಾನು ಹೆದರೋಲ್ಲ. ರಫೆಲ್ ಡೀಲ್ ನಲ್ಲಿ ನಡೆದ ಅವ್ಯವಹಾರದ ಬಗ್ಗೆ ದೇಶದ ತೆರಿಗೆದಾರನಿಗೆ ತಿಳಿಯಬೇಕು' ಎಂದು ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications