'ಸ್ಟಾರ್ಟ್ ಅಪ್ ಇಂಡಿಯಾದಿಂದ ಪಕೋಡಾ ಮಾರುವ ತನಕ'
ನವದೆಹಲಿ, ಮೇ 9: ಆರಂಭದಲ್ಲಿ ಅವರು ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಿದರು. ಅ ನಂತರ ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಮತ್ತು ಅದು ಕೊನೆಯಾಗಿದ್ದು ಪಕೋಡಾ ಮಾರಾಟದಲ್ಲಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಹರಿಯಾಣದಲ್ಲಿ ತಮ್ಮ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿ ಅವರನ್ನು ಗೇಲಿ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ನರೇಂದ್ರ ಮೋದಿ ಮಾತನಾಡುತ್ತಾ, ಪಕೋಡಾ ಮಾರುವುದು ಕೂಡ ಉದ್ಯೋಗಾವಕಾಶವೇ ಎಂದಿದ್ದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಪಕೋಡಾ ಮಾರುವುದು ಕೂಡ ಉದ್ಯೋಗಾವಕಾಶ ಎನ್ನುವುದಾದರೆ ಇದೇ ತರ್ಕದಲ್ಲಿ ಭಿಕ್ಷೆ ಬೇಡುವುದು ಕೂಡ ಉದ್ಯೋಗವೇ ಎಂದಿದ್ದರು.
ಕಳೆದ ನಲವತ್ತೈದು ವರ್ಷದಲ್ಲೇ ನಿರುದ್ಯೋಗ ಪ್ರಮಾಣ ಅತಿ ಹೆಚ್ಚಿದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಇದು ಮೋದಿ ಕೊಡುಗೆ ಎಂದಿದ್ದಾರೆ ರಾಹುಲ್ ಗಾಂಧಿ. ಕಳೆದ ಐದು ವರ್ಷಗಳಲ್ಲಿ ಏನು ಮಾಡಿದ್ದೀರಿ ಎಂದು ಕೇಳಲು ಬಯಸುತ್ತೇನೆ. ನೀವು ಈ ದೇಶಕ್ಕೆ ಏನು ನೀಡಿದ್ದೀರಿ ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಲೋಕಸಭೆ ಚುನಾವಣೆ ವೇಳೆಯಲ್ಲಿ, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಅದನ್ನು ಪ್ರಧಾನಿ ಈಡೇರಿಸಿಲ್ಲ ಎಂದು ವಿಪಕ್ಷಗಳು ಅರೋಪ ಮಾಡುತ್ತಿವೆ.












Click it and Unblock the Notifications