ನವದೆಹಲಿ ಕೊರೊನಾವೈರಸ್ ಸೋಂಕಿತರ ಅಂಕಿ-ಅಂಶ ಸಹಿತ ಮಾಹಿತಿ
ನವದೆಹಲಿ, ಜುಲೈ.19: ನೊವೆಲ್ ಕೊರೊನಾವೈರಸ್ ಅಟ್ಟಹಾಸವು ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ ಸಾವಿರದ ಗಡಿ ದಾಟಿ ಹೋಗಿದೆ.
ಕಳೆದ 24 ಗಂಟೆಗಳಲ್ಲೇ 1211 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ದೃಢಪಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 1,22,793ಕ್ಕೆ ಏರಿಕೆಯಾಗಿದೆ. ಭಾನುವಾರ 1860 ಮಂದಿ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ.
ನವದೆಹಲಿಯಲ್ಲಿ ಒಂದೇ ದಿನ 31 ಕೊರೊನಾವೈರಸ್ ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 3628ಕ್ಕೆ ಏರಿಕೆಯಾಗಿದೆ. ಇದುವರೆಗೂ 1,03,134 ಮಂದಿ ಸೋಂಕಿತರಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗಿದ್ದು, ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೊವಿಡ್-19 ತಪಾಸಣೆ ವೇಗ ಹೆಚ್ಚಳ:
ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ವೇಗವು ಪ್ರತಿನಿತ್ಯ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 5762 ಜನರನ್ನು ಆರ್ ಟಿಪಿಸಿಆರ್/ಸಿಬಿಎನ್ಎಎಟಿ/ಟ್ರು ನೆಟ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು, 14,444 ಜನರನ್ನು ರಾಪಿಡ್ ಆಂಟಿಜೆನ್ ತಪಾಸಣೆಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 8,18,989 ಜನರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ.












Click it and Unblock the Notifications