ಮೈಸೂರಿಗೆ ಕಪ್ಪುಚುಕ್ಕೆಯಾಗುತ್ತಿರುವ ಅನೈತಿಕ ಚಟುವಟಿಕೆ: ನಿಯಂತ್ರಣ ಹೇಗೆ..?
ಮೈಸೂರು, ಆಗಸ್ಟ್ 07: ಸಾಂಸ್ಕೃತಿಕನಗರಿ, ಪ್ರವಾಸಿಗರ ಸ್ವರ್ಗ, ಎಂದೆಲ್ಲ ಅನ್ವರ್ಥ ಹೆಸರುಗಳಿಂದ ಕರೆಯಿಸಿಕೊಳ್ಳುವ ಮೈಸೂರಿನಲ್ಲಿ ಕೆಲವರು ವಾಮಮಾರ್ಗದಲ್ಲಿ ಹಣ ಸಂಪಾದಿಸುವ ಸಲುವಾಗಿ ಕೆಲವು ಕ್ಷೇತ್ರ ಮತ್ತು ವೃತ್ತಿಯನ್ನು ನೆಪವಾಗಿಟ್ಟುಕೊಂಡು ಒಳಗೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಬೇಸರದ ಸಂಗತಿಯಾಗಿದ್ದು, ಇದರಿಂದ ಆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರನ್ನು ಜನ ಸಂಶಯದಿಂದ ನೋಡುವಂತಾಗಿದೆ.
ಇತ್ತೀಚೆಗಿನ ವರ್ಷಗಳಲ್ಲಿ ವೇಶ್ಯಾವಾಟಿಕೆ ಬೇರೆ, ಬೇರೆ ರೀತಿಯಲ್ಲಿ ನಡೆಯುತ್ತಿದ್ದು, ಪೊಲೀಸರ ಕಣ್ಣಿಗೆ ಬೀಳಬಾರದೆಂಬ ಕಾರಣಕ್ಕೆ ಬ್ಯೂಟಿಪಾರ್ಲರ್, ಯೋಗ ಕೇಂದ್ರ, ಪಿಜಿ, ಆಯುರ್ವೇದಿಕ್ ಮಸಾಜ್ ಸೆಂಟರ್ ಗಳನ್ನು ಮೇಲ್ನೋಟಕ್ಕೆ ಆರಂಭಿಸಿ ಆ ನಂತರ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿರುವುದು ಕಂಡು ಬರುತ್ತಿದೆ. ಇದು ನಿಜಕ್ಕೂ ದುರಂತದ ಸಂಗತಿಯಾಗಿದೆ.

ಕೆಲವರು ಹಣಕ್ಕಾಗಿ ಈ ರೀತಿಯ ಕೃತ್ಯಗಳನ್ನು ಎಸಗುತ್ತಿರುವುದರಿಂದ ಪ್ರಾಮಾಣಿಕ ಮತ್ತು ನಿಯತ್ತಾಗಿ ಕೆಲಸ ಮಾಡಿಕೊಂಡು ಜೀವನ ನಡೆಸಿಕೊಂಡು ಹೋಗುತ್ತಿರುವವರಿಗೆ ಕಷ್ಟವಾಗಿದೆ. ಈಗಾಗಲೇ ಪೊಲೀಸರು ದಾಳಿ ನಡೆಸಿದಾಗ ಯೋಗ ಕೇಂದ್ರ, ಬ್ಯೂಟಿ ಪಾರ್ಲರ್ ಮತ್ತು ಮಸಾಜ್ ಸೆಂಟರ್ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲೂ ಆಯುರ್ವೇದ ಮಸಾಜ್ ಹೆಸರಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಮಸಾಜ್ ಅಂಡ್ ಸ್ಪಾ ಸೆಂಟರ್ ಗಳು ಅಸಲಿಯತ್ತು ಆಗಾಗ್ಗೆ ಬಯಲಾಗುತ್ತಿವೆ.
ಅನೈತಿಕ ವ್ಯವಹಾರಗಳೇ ಬಂಡವಾಳ
ಕೆಲವೊಂದು ಸ್ಪಾ ಸೆಂಟರ್ ಗಳನ್ನು ಮಹಿಳೆಯರೇ ನಡೆಸುತ್ತಿದ್ದು, ಅವರೇ ವ್ಯವಹಾರದ ಕಿಂಗ್ ಪಿನ್ ಆಗಿರುತ್ತಾರೆ. ಪೊಲೀಸರ ದಾಳಿ ಬಳಿಕ ಬೇರೆ ಬಡಾವಣೆಗೆ ಕಾರ್ಯಕ್ಷೇತ್ರವನ್ನು ಬದಲಾಯಿಸಿ ಆನ್ ಲೈನ್ ಮೂಲಕವೇ ವ್ಯವಹಾರ ನಡೆಸುತ್ತಾರೆ. ಇದನ್ನು ತಡೆಯುವುದು ಸುಲಭವಾಗಿ ಉಳಿದಿಲ್ಲ. ಇಂತಹ ಅನೈತಿಕ ಚಟುವಟಿಕೆಗಳೆಲ್ಲವೂ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿಯೇ ನಡೆಯುತ್ತಿರುವುದು ಕಂಡು ಬರುತ್ತದೆ.

ಇದಕ್ಕೆ ಲಾಡ್ಜ್ ಗಳು ಕೂಡ ಹೊರತಾಗಿಲ್ಲ. ಸ್ಪಾ ಕೇಂದ್ರಗಳು ಹೋಟೆಲ್ ಗಳ ಕೊಠಡಿಯಲ್ಲಿಯೇ ನಡೆಯುತ್ತಿದ್ದು ಆಗೊಮ್ಮೆ, ಈಗೊಮ್ಮೆ ಮಾತ್ರ ಅವುಗಳ ಬಗ್ಗೆ ಜನ ದೂರು ನೀಡಿ ಪೊಲೀಸರು ದಾಳಿ ಮಾಡುತ್ತಾರೆ. ಉಳಿದಂತೆ ಯಾರಿಗೂ ಗೊತ್ತೇ ಆಗದಂತೆ ಎಲ್ಲವೂ ನಡೆಯುತ್ತಿರುತ್ತದೆ. ಇತ್ತೀಚೆಗೆ ಮೊಬೈಲ್, ಇಂಟರ್ ನೆಟ್ ಬಂದ ಬಳಿಕವಂತು ಅನೈತಿಕ ವ್ಯವಹಾರ ನಡೆಸುವುದು ಹಲವರಿಗೆ ಸುಲಭವಾಗಿದೆ. ಕೆಲವೊಂದು ಆಪ್ ಬಳಸಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
ಕೆಲಸದ ಪಾವಿತ್ರ್ಯತೆಗೆ ಧಕ್ಕೆ
ಅನೈತಿಕ ಚಟುವಟಿಕೆ ಯಾವುದರಲ್ಲಿ ನಡೆಯುತ್ತಿದೆ? ಯಾವುದರಲ್ಲಿ ನಡೆಯುತ್ತಿಲ್ಲ? ಎಂಬುದನ್ನು ಹೇಳುವುದೇ ಕಷ್ಟವಾಗಿದೆ. ಪೊಲೀಸರ ಮತ್ತು ಜನರ ಕಣ್ಣಿಗೆ ಮಣ್ಣೆರೆಚುವ ಸಲುವಾಗಿ ಬೇರೆ, ಬೇರೆ ವೇಷಗಳನ್ನು ಧರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಬೇರೆ, ಬೇರೆ ಕ್ಷೇತ್ರವನ್ನೆಲ್ಲ ಬಳಸಿಕೊಳ್ಳುತ್ತಿರುವುದು ದುರಂತದ ಸಂಗತಿಯಾಗಿದೆ. ಬ್ಯೂಟಿಪಾರ್ಲರ್, ಮಸಾಜ್ ಸೆಂಟರ್, ಪಿಜಿ, ಯೋಗ ತರಗತಿ, ಆಯುರ್ವೇದಿಕ್ ಸೆಂಟರ್ ಹೀಗೆ ಕೆಲವೊಂದು ನಾಮಫಲಕವನ್ನು ಕಟ್ಟಡದ ಮುಂದೆ ನೇತು ಹಾಕಿಕೊಂಡು ಅದರ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದ್ದಾರೆ. ಹೀಗೆ ಮಾಡುವುದು ಘೋರ ಅಪರಾಧವಾಗಿದೆ.
ಮೈಸೂರು ಯೋಗಕ್ಕೆ ಖ್ಯಾತಿ ಪಡೆದಿದೆ. ಇದನ್ನು ದುರುಪಯೋಗಪಡಿಸಿಕೊಂಡು ಅನೈತಿಕ ಚಟುವಟಿಕೆ ನಡೆಸಿ ಸಿಕ್ಕಿ ಬಿದ್ದ ಘಟನೆಯೂ ಬೇಕಾದಷ್ಟಿವೆ. ಇನ್ನು ಬ್ಯೂಟಿಪಾರ್ಲರ್ ಮೂಲಕ ಸಾವಿರಾರು ಹೆಣ್ಮಕ್ಕಳು ಜೀವನ ಕಂಡುಕೊಂಡಿದ್ದಾರೆ. ಹೀಗಿರುವಾಗ ಬ್ಯೂಟಿಪಾರ್ಲರ್ ತೆರೆದು ಅದರೊಳಗೆ ಅನೈತಿಕ ಚಟುವಟಿಕೆಯನ್ನು ದುರುಳರು ನಡೆಸಿದರೆ ನಿಯತ್ತಾಗಿ ದುಡಿದು ಜೀವನ ಮಾಡುವ ಹೆಣ್ಮಕ್ಕಳ ಘನತೆಗೆ ಧಕ್ಕೆ ಅಲ್ಲವೆ? ಇದೆಲ್ಲದರ ನಡುವೆ ದೇಹದ ಆರೋಗ್ಯಕ್ಕೆ ಸಹಕಾರಿಯಾಗಬೇಕಾದ ಮಸಾಜ್ ಸೆಂಟರ್ ಕೂಟ ನೈತಿಕತೆ ಮೀರಿವೆ. ಹೀಗಾಗಿ ಅವುಗಳನ್ನು ಸಂಶಯದಿಂದ ನೋಡುವಂತಾಗಿದೆ..
ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ
ಒಟ್ಟಾರೆಯಾಗಿ ಹೇಳಬೇಕೆಂದರೆ ಕೆಲವರು ಹಣ ಮಾಡುವ ಉದ್ದೇಶದಿಂದ ಕೆಲವು ಕ್ಷೇತ್ರ ಮತ್ತು ವೃತ್ತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು, ಕಲುಷಿತಗೊಳಿಸುತ್ತಿದ್ದಾರೆ. ಇದರಿಂದ ಆಯಾಯ ಕ್ಷೇತ್ರದಲ್ಲಿ ನಿಯತ್ತಾಗಿ ಕೆಲಸ ಮಾಡುವವರಿಗೆ ಸಂಕಷ್ಟ ಒದಗಿ ಬಂದಿದೆ. ಇನ್ನಾದರೂ ಈ ರೀತಿಯ ದಂಧೆಗಳನ್ನು ಹುಡುಕಿ ಕಡಿವಾಣ ಹಾಕುವ ಮೂಲಕ ಮೈಸೂರಿನ ಹೆಸರಿಗೆ ಕಪ್ಪುಚುಕ್ಕಿ ತರುವವರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.












Click it and Unblock the Notifications