ದುಷ್ಟರ ಹೆಡೆಮುರಿಕಟ್ಟಲು ಎಸ್ಪಿ ರವಿ ಅಂಡ್ ಟೀಂ ಸಜ್ಜು
ಮೈಸೂರು, ಮೇ 2 : ಮೊನ್ನೆ ಮೊನ್ನೆಯಿನ್ನು ವೀಕೆಂಡ್ ವಿತ್ ರಮೇಶ್ ನಲ್ಲಿ ತಮ್ಮದೇ ಆದ ಸ್ಟೈಲ್ ನಲ್ಲಿ ಯುವಕರಿಗೆ ತ ಮ್ಮ ಜೀವನ ಶೈಲಿಯನ್ನು ವಿವರಿಸಿದ ರವಿ ಡಿ.ಚನ್ನಣ್ಣನವರ್ ಸದ್ಯ ಎಲ್ಲರ ಸ್ಪೂರ್ತಿಯ ಚಿಲುಮೆ. ಅವರ ಕಾಯಕಗಳೇ ಜನಸ್ನೇಹಿ ಕೂಡ. ಮೈಸೂರು ಜಿಲ್ಲೆಯ ಎಸ್ಪಿ ರವಿ ಹೊಸ ಕಾಯಕಕ್ಕೊಂದು ಕೈ ಹಾಕಿದ್ದಾರೆ. ಅದೇ ಜನಸ್ನೇಹಿ ಪೊಲೀಸ್.
ಏನಿದು ಹೊಸ ಯೋಜನೆ..?
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ, ಸಾರ್ವಜನಿಕರು - ಪೊಲೀಸರ ನಡುವೆ ಬಾಂಧವ್ಯ ಮೂಡಿಸಿ ಜನಸ್ನೇಹಿ ಕಾರ್ಯ ನಿರ್ವಹಿಸಲು ಬೀಟ್ ವಸ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಎಸ್ಪಿ ರವಿ ಡಿ. ಚನ್ನಣ್ಣನವರ್ ಒನ್ ಇಂಡಿಯಾಗೆ ತಿಳಿಸಿದ್ದಾರೆ.

ಹೊಸ ಕ್ರಮವು ಕಾರ್ಮಿಕರ ದಿನಾಚರಣೆ ದಿನ ಅಂದ್ರೆನಿನ್ನೆಯಿಂದಲೇ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಪೊಲೀಸ್ ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿ , ಜನಸ್ನೇಹಿ ಹಾಗೂ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಹಲವು ಬದಲಾವಣೆ ಮಾಡಲಾಗಿದೆ. ಸುಧಾರಿತ ಬೀಟ್ ಮತ್ತು ಗಸ್ತು ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಈ ತಿಂಗಳಿನಿಂದಲೇ ಜಾರಿಗೆ ತರಲಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿಗೇ ಗ್ರಾಮ ವಾಸ್ತವ್ಯ ಹೂಡಿ ಸುಧಾರಿಸಿ ಗಸ್ತು ವ್ಯವಸ್ಥೆ ನಿರ್ವಹಿಸಲಾಗುತ್ತದೆ ಎನ್ನು ತ್ತಾರೆ ರವಿ.
ಈ ಬೀಟ್ ನಲ್ಲಿ ಆಗುವ ಬದಲಾವಣೆಯೇನು..?
ಠಾಣೆಯಲ್ಲಿ ಪೇದೆ ಹಾಗೂ ಮುಖ್ಯ ಪೇದೆಗಳಗೆ ಠಾಣಾ ವ್ಯಾಪ್ತಿಯ ಗ್ರಾಂಗಳನ್ನು ವಿಂಗಡಣೆ, ಪ್ರದೇಶಕ್ಕೊಬ್ಬ ಪೊಲೀಸ್ ತತ್ವದಡಿಯಲ್ಲಿ ಬೀಟ್ ಗೆ ನೇಮಿಸಲ್ಪಟ್ಟ ಪೇದೆ ಹಾಗೂ ಮುಖ್ಯ ಪೇದೆ ಬೀಟ್ ನ ಜವಾಬ್ದಾರಿ ಹೊಂದಿರುತ್ತಾರೆ. ಬೀಟ್ ಗೆ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ಪ್ರತಿ ವರುಷಕ್ಕೊಮ್ಮೆ ಬದಲಾವಣೆ ಮಾಡಲಾಗುವುದು. ಸಾರ್ವಜನಿಕರು ಹಾಗೂ ಠಾಣೆಯ ನಡುವೆ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸಲಿರುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಮೇಲೆ ವಿಶ್ವಾಸ ಮೂಡಿಸಲು ಈ ಯೋಜನೆ ಎನ್ನುತ್ತಾರೆ ಎಸ್ಪಿ ಚನ್ನಣ್ಣನವರ್.

ಸಿಬ್ಬಂದಿ ಸಮರ್ಪಕವಾಗಿ ಬೀಟ್ ನಿರ್ವಹಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಪಿಎಸ್ಐರವರು ಉಸ್ತುವಾರಿ ನೋಡಿಕೊಳ್ಳಲಿದ್ದು, ಸಿಪಿಐ ಹಾಗೂ ಡಿಎಎಸ್ಪಿಗಳು ಠಾಣಾ ಭೇಟಿಯ ಸಂದರ್ಭದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಸುಧಾರಿತ ಬೀಟ್ ವ್ಯವಸ್ಥೆಯ ರಚನೆ ಕಾರ್ಯನಿರ್ವಹಣೆಯ ಬಗ್ಗೆ ಎಲ್ಲಾ ಹಂತದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಬುನಾದಿ ತರಬೇತಿಯ ಸಂದರ್ಭದಲ್ಲಿ ಮತ್ತು ಕ್ಷೇತ್ರದಲ್ಲಿ ಕರ್ತವ್ಯ ನಿರವ್ಹಣೆಯ ವೇಳೆಯು ನಿಯಮಿತವಾಗಿ ತರಬೇತಿಯನ್ನು ಆಯೋಜಿಸಿ ಸುಧಾರಿತ ಬೀಟ್ ವ್ಯವಸ್ಥೆಯ ಬಗ್ಗೆ ಅಧಿಕಾರಿ ಮತ್ತು ಸಿಬ್ಬಂದಿಯಲ್ಲಿ ಅರಿವು ಮೂಡಿಸಲಾಗುವುದು.
ಕಾರ್ಯಕ್ಷಮತೆ ಹೇಗೆ..?
ಬೀಟ್ ಗೆ ನೇಮಕವಾದ ಪೊಲೀಸ್ ಸಿಬ್ಬಂದಿ ಬೀಟ್ ಗ್ರಾಮಗಳಲ್ಲಿ ಅರ್ಜಿ ವಿಚಾರಣೆ, ವಾರೆಂಟ್, ಸಮನ್ಸ್ ಜಾರಿ, ಅಕ್ರಮ ಚಟುವಟಿಕೆ, ಗುಪ್ತ ಮಾಹಿತಿ ಸಂಗ್ರಹಣೆ ಮತ್ತು ದಲಿತ ಬೀದಿಗಳಿಗೆ ಭೇಟಿ ನೀಡಿ ದಲಿತ ಸಭೆ ನಡೆಸುವುದು ಮತ್ತು ಗ್ರಾಮದ ಕುಂದು ಕೊರತೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಇನ್ನು ಬೀಟ್ ಗೆ ಸಂಬಂಧಪಟ್ಟ ಗ್ರಾಮಗಳು, ಬೀಟ್ ಗೆ ನೇಮಿಸಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗೆ ಇಲಾಖೆಯಿಂದ ದೂರವಾಣಿ ಸಂಖ್ಯೆ ನೀಡಿದ್ದು , ಹೆಸರು, ಭಾವಚಿತ್ರ, ದೂರವಾಣಿ ಸಂಖ್ಯೆಗಳ ವಿವರವನ್ನೊಳಗೊಂಡ ಮಾಹಿತಿಯ ಫಲಕವನ್ನು ಪ್ರತಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಲಾಗಿದೆ.












Click it and Unblock the Notifications