ಮೈಸೂರು–ಬೆಂಗಳೂರು ಹೈವೇಲಿ ಶುರುವಾಗಲಿದೆ ಇ-ಚಾರ್ಜಿಂಗ್ ಪಾಯಿಂಟ್
ಮೈಸೂರು, ಮೇ 31 : ಮೈಸೂರು - ಬೆಂಗಳೂರು ಮುಖ್ಯ ರಸ್ತೆಯಲ್ಲಿ ಇ- ವಾಹನಗಳ ಚಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸಲು ಸೆಸ್ಕ್ ಚಿಂತನೆ ನಡೆಸಿದ್ದು, ಈಗಾಗಲೇ ಆರು ಕಡೆ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.
ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇಲ್ಲಿಯವರೆಗೂ ಸುಮಾರು 119 ಇ ವಾಹನಗಳ ನೋಂದಣಿಯಾಗಿದೆ. ಅದರಲ್ಲಿ 7 ಇ ರಿಕ್ಷಾ, 6 ಕಾರು ಹಾಗೂ ಉಳಿದಂತೆ ದ್ವಿಚಕ್ರ ವಾಹನಗಳು. ಬ್ಯಾಟರಿ ಬಳಕೆ ಇಲ್ಲದಿರುವುದು ಹಾಗೂ ಚಾರ್ಜಿಂಗ್ ಪಾಯಿಂಟ್ ಗಳ ಕೊರತೆಯಿಂದ ವಾಹನಗಳನ್ನು ಖರೀದಿಸಲು ಜನ ನಿರಾಸಕ್ತಿ ತಾಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇ ವಾಹನಗಳ ಬಳಕೆಯನ್ನು ಉತ್ತೇಜಿಸುವ ರೀತಿಯಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸಿ, ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಇಲ್ಲದಿರುವುದರಿಂದ ಇ ವಾಹನಗಳ ಖರೀದಿಗೆ ಜನ ಮನಸ್ಸು ಮಾಡುತ್ತಿಲ್ಲ. ಸೂಕ್ತ ವ್ಯವಸ್ಥೆ ಇದ್ದರೆ ಈ ವಾಹನಗಳ ಪ್ರಮಾಣವೂ ಹೆಚ್ಚಾಗಿರುತ್ತದೆ. ಇದರಿಂದ ಸಂಪನ್ಮೂಲಗಳ ಉಳಿತಾಯವೂ ಆಗುತ್ತದೆ. ಅಲ್ಲದೇ ಪರಿಸರ ಮಾಲಿನ್ಯದ ಪ್ರಮಾಣವೂ ಕಡಿಮೆಯಾಗುತ್ತದೆ. ಈ ದೃಷ್ಟಿಯಿಂದ ಜರೂರಾಗಿ ಚಾರ್ಜಿಂಗ್ ಪಿನ್ ಸೌಲಭ್ಯವನ್ನು ಕಲ್ಪಿಸುವ ಮುಂದಾಗುತ್ತೇವೆ ಎನ್ನುತ್ತಾರೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಹಲವು ಘಟಕಗಳನ್ನು ಸ್ಥಾಪಿಸಿದ್ದು, ಹಲವು ಇ ವಾಹನಗಳು ನಗರದಲ್ಲಿ ಸಂಚರಿಸುತ್ತಿವೆ. ಅದೇ ಮಾದರಿಯಲ್ಲಿ ಬೆಂಗಳೂರು - ಮೈಸೂರು ಹೈವೇ ರಸ್ತೆಯಲ್ಲಿಯೂ ಘಟಕಗಳನ್ನು ಸ್ಥಾಪಿಸಲಾಗುವುದು. ಮೊದಲ ಹಂತದಲ್ಲಿ ಮದ್ದೂರು, ಮಂಡ್ಯ ವ್ಯಾಪ್ತಿಯಲ್ಲಿ ತಲಾ 2 ಹಾಗೂ ಶ್ರೀರಂಗಪಟ್ಟಣ - ಮೈಸೂರು ನಗರದಲ್ಲಿ ತಲಾ 1 ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲು ನಿರ್ಧರಿಸಲಾಗಿದೆ.
ಎರಡನೇ ಹಂತದಲ್ಲಿ ಮೈಸೂರು ನಗರದೊಳಗೆ ಸಾರ್ವಜನಿಕ ಮತ್ತು ಖಾಸಗಿ ಚಾರ್ಜಿಂಗ್ ಸ್ಟೇಷನ್ ತೆರೆಯುವ ಚಿಂತನೆ ಇದೆ. ಅಲ್ಲದೆ ಸೆಸ್ಕ್ ಕಾರ್ಪೊರೇಟ್ ಕಚೇರಿಯಲ್ಲೂ ಒಂದು ಚಾರ್ಜಿಂಗ್ ಘಟಕ ತೆರೆಯುವ ಚಿಂತನೆಯೂ ಇದೆ. 8*20 ಜಾಗದಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲು ಚಿಂತನೆ ನಡೆಸಿದ್ದು, ನಿತ್ಯ ಎರಡು ವಾಹನಗಳಿಗೆ ವಿದ್ಯುತ್ ಚಾರ್ಜ್ ಒದಗಿಸುವ ಸಾಮರ್ಥ್ಯ ಹೊಂದಿದೆ. ಚಾರ್ಜ್ ಆದ ವಾಹನ ಸುಮಾರು 40 ಕಿಲೋ ಮೀಟರ್ ಸಂಚರಿಸಬಹುದಾಗಿದೆ.












Click it and Unblock the Notifications