Santro Ravi : ಗಂಟೆಗೊಮ್ಮೆ ಇನ್ಸುಲಿನ್ ತೆಗೆದುಕೊಳ್ಳುವ ಸ್ಯಾಂಟ್ರೋ ರವಿ: ಮೈಸೂರಿನಲ್ಲಿ ತೀವ್ರಗೊಂಡ ವಿಚಾರಣೆ
ಮೈಸೂರು, ಜನವರಿ 14: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕರ್ನಾಟಕ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸ್ಯಾಂಟ್ರೋ ರವಿ ಬಂಧನವಾಗಿದೆ.
ಗುಜರಾತ್ ಅಹಮದಾಬಾದ್‌ನಲ್ಲಿ ಸಿಕ್ಕಿಬಿದ್ದಿರುವ ಸ್ಯಾಂಟ್ರೋ ರವಿಯನ್ನು ಮೈಸೂರಿಗೆ ಕರೆ ತರಲಾಗಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಆರಂಭಿಸಿದ್ದಾರೆ.
ವಿಜಯನಗರ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೋ ರವಿ ವಿರುದ್ಧ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಹೀಗಾಗಿ ಠಾಣೆಯಲ್ಲೇ ಕುಳಿತು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸ್ಯಾಂಟ್ರೋ ರವಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಆರಂಭಿಕ ವಿಚಾರಣೆ ನಂತರ ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆದೊಯ್ಯಲಿದ್ದಾರೆ.

ವೈದ್ಯಕೀಯ ಪರೀಕ್ಷೆಯ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯನಗರ ಪೊಲೀಸ್ ಠಾಣೆಯ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಿದ್ದರು.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು, "ಬಂಧನವಾದ 24 ಗಂಟೆ ಒಳಗೆ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿದೆ. ಹಾಗಾಗಿ ಸ್ಯಾಂಟ್ರೋ ರವಿಯಿಂದ ಪ್ರಾಥಮಿಕ ಮಾಹಿತಿ ಪಡೆಯುತ್ತಿದ್ದೇವೆ. ಸದ್ಯ ಈ ವೇಳೆ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ" ಎಂದು ತಿಳಿಸಿದ್ದಾರೆ.
"ಸ್ಯಾಂಟ್ರೋ ರವಿ 11 ದಿನಗಳ ಕಾಲ ಎಲ್ಲೆಲ್ಲಿ ಓಡಾಡಿಕೊಂಡಿದ್ದ, ಆತನಿಗೆ ಯಾರ್ಯಾರು ಸಹಾಯ ಮಾಡಿದ್ದರು ಎಂಬುದರ ಬಗ್ಗೆ ಆರಂಭಿಕ ಮಾಹಿತಿ ಪಡೆಯುತ್ತಿದ್ದೇವೆ. ಸ್ಯಾಂಟ್ರೋ ರವಿ ವಿಚಾರಣೆಗೆ ಸ್ಪಂದಿಸುತ್ತಿದ್ದಾನೆ. ಆತ ಡಯಾಬಿಟಿಕ್ ಇದ್ದಾನೆ. ಗಂಟೆಗೊಮ್ಮೆ ಇನ್ಸುಲಿನ್ ಪಡೆದುಕೊಳ್ಳುತ್ತಿದ್ದಾನೆ. ಸೂಕ್ತ ಔಷಧಿ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದೇನೆ. ಅವನಿಗೆ ಡಯಾಬಿಟಿಕ್ ಬಿಟ್ಟರೆ ಬೇರೆ ಸಮಸ್ಯೆ ಇದ್ದಂತೆ ಕಾಣುತ್ತಿಲ್ಲ" ಎಂದು ಹೇಳಿದರು.












Click it and Unblock the Notifications