ಯೋಗ ದಿನಾಚರಣೆಗೆ ಮೈಸೂರಿಗೆ ಪ್ರಧಾನಿ ಮೋದಿ ಆಗಮನ?
ಮೈಸೂರು, ಏಪ್ರಿಲ್ 10: ನಗರದಲ್ಲಿ ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರು ಬರುವ ಸಾಧ್ಯತೆ ಇದೆ ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು.
ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಸಹಯೋಗದಲ್ಲಿ ಮೈಸೂರು ಯೋಗ ಫೌಂಡೇಷನ್ ಹಾಗೂ ಆಯುಷ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 'ಯೋಗೋತ್ಸವ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಈ ಹೇಳಿಕೆಯನ್ನು ಸಂಸದ ಪ್ರತಾಪ್‌ಸಿಂಹ ನೀಡಿದ್ದಾರೆ.
"ಕೋವಿಡ್ ಕಾರಣದಿಂದ ಕಳೆದ 2 ವರ್ಷದಿಂದ ಯೋಗ ದಿನ ಆಚರಣೆ ಮಾಡಲು ಸಾಧ್ಯವಿರಲಿಲ್ಲ. ಹಾಗಾಗಿ ಈ ಬಾರಿ ಮೈಸೂರಿಗೆ ಬರುವಂತೆ ಪ್ರಧಾನಿ ಅವರಿಗೆ ಮನವಿ ಮಾಡಲಾಗಿದೆ. ಲಡಾಖ್ ಅಥವಾ ಮೈಸೂರಿಗೆ ಬರಲು ಪ್ರಧಾನಿಗಳ ಪ್ರವಾಸ ಪಟ್ಟಿ ಮಾಡಲಾಗಿದ್ದು, ಸಾಂಸ್ಕೃತಿಕ ನಗರಿಗೆ ಬರುತ್ತಾರೆ ಎಂಬ ವಿಶ್ವಾಸವಿದೆ," ಎಂದರು.

"ಮೋದಿ ಅವರು ಪ್ರಧಾನಿಯಾದ ಬಳಿಕ ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆಯ ಗೊತ್ತುವಳಿ ಮಂಡಿಸಿದರು. ಆಗ ಸಭೆಯಲ್ಲಿ ಹಾಜರಿದ್ದ 177 ದೇಶಗಳು ಗೊತ್ತುವಳಿಯನ್ನು ಒಕ್ಕೊರಲಿನಿಂದ ಅಂಗೀಕರಿಸಿದ್ದವು. ಅಲ್ಲದೆ 2019ರಲ್ಲಿ 197 ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಆಚರಿಸುವ ಮೂಲಕ ಯೋಗದ ಮಹತ್ವ ಸಾರಿದವು," ಎಂದು ಹೇಳಿದರು.

ಯೋಗ ದಾಖಲೆಯನ್ನು ಮುರಿಯುವ ಭರವಸೆ ವ್ಯಕ್ತಪಡಿಸಿದ ಸಂಸದ
"ಈ ಹಿಂದೆ ಮೈಸೂರು ಯೋಗ ದಿನದಂದು ವಿಶ್ವ ದಾಖಲೆ ಮಾಡಿತ್ತು. ಈ ಬಾರಿ ಕೂಡ ಎಲ್ಲರೂ ಕೈಜೋಡಿಸುವ ಮೂಲಕ ಈಗ ಇರುವ 1.2 ಲಕ್ಷ ಯೋಗ ದಾಖಲೆಯನ್ನು ಮುರಿಯಬೇಕಾಗಿದೆ. ಈ ಬಾರಿ ಮೈಸೂರಿನಲ್ಲಿ 1.10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಯೋಗಬಂಧುಗಳು ಸೇರುವ ನಿರೀಕ್ಷೆ ಇದೆ," ಎಂದು ಭರವಸೆ ವ್ಯಕ್ತಪಡಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ ಮಾತನಾಡಿದರು. ಯೋಗ ಫೌಂಡೇಶನ್‌ನ ಅಧ್ಯಕ್ಷ ಶ್ರೀಹರಿ, ಡಾ.ರಾಘವೇಂದ್ರ ಪೈ ಹಾಗೂ ಗಣೇಶ್ ಶಂಖನಾದದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೇಯರ್ ಸುನಂದಾ ಪಾಲನೇತ್ರ ಹಾಜರಿದ್ದರು. ಡಾ.ಚಂದ್ರ ಆಚಾರ್ಯ ಅವರು ವಿಶೇಷ ಯೋಗಾಭ್ಯಾಸದ ಮೂಲಕ ಗಮನ ಸೆಳೆದರು.












Click it and Unblock the Notifications