New Year celebration 2023: ಮೈಸೂರಿನಲ್ಲಿ ಪೊಲೀಸರ ಮಾರ್ಗಸೂಚಿಗಳು, ಇಲ್ಲಿದೆ ವಿವರ
ಮೈಸೂರು, ಡಿಸೆಂಬರ್, 29: ಹೊಸ ವರ್ಷವನ್ನು ಸ್ವಾಗತಿಸಲು ಇನ್ನೇನು ದಿನಗಣನೆ ಶುರುವಾಗಿದೆ. ನಗರ ಪೊಲೀಸರು ಡಿಸೆಂಬರ್ 31ರ ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದು, ಡಿಜೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.
ಡಿಸೆಂಬರ್ 31ರ ರಾತ್ರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ಇದಕ್ಕಾಗಿ ನಗರದೆಲ್ಲೆಡೆ ಸಿಸಿ ಟಿವಿ ಕ್ಯಾಮೆರಾಗಳನ್ನು ಇಟ್ಟು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ಪೊಲೀಸ್ ಕಣ್ಗಾವಲಿನಲ್ಲಿ ನೂತನ ವರ್ಷವನ್ನು ಸ್ವಾಗತಿಸಲು ನಗರದಲ್ಲಿ ಸಿದ್ಧತೆ ನಡೆದಿದೆ.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಮಾತನಾಡಿ, ಡಿಸೆಂಬರ್ 31ರ ರಾತ್ರಿ ಹೊಸ ವರ್ಷ ಆಚರಣೆ ನೆಪದಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ನಿಲ್ಲಿಸಿ ತೊಂದರೆ ಕೊಡಬಾರದು. ಸಾರ್ವಜನಿಕರ ಇಚ್ಛೆಗೆ ವಿರುದ್ಧವಾಗಿ ಶುಭ ಕೋರುವ ನೆಪದಲ್ಲಿ ಕಿರಿಕಿರಿ ಮಾಡುವುದು, ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ನಗರದಲ್ಲಿ 18 ವಿಶೇಷ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಹೊಸದಾಗಿ 275 ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ
ನಗರದಲ್ಲಿ ಈಗಾಗಲೇ 50 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಹೊಸದಾಗಿ 275 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಪೊಲೀಸ್ ಕಂಟ್ರೋಲ್ ರೂಂ ಮೂಲಕ ನಿಗಾ ವಹಿಸಲಾಗುತ್ತದೆ. ಇದರೊಂದಿಗೆ ಸಾರ್ವಜನಿಕರು ಅಂಗಡಿ, ಮನೆ ಇತ್ಯಾದಿ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಳಬೇಕು. ಮಧ್ಯರಾತ್ರಿ 1 ಗಂಟೆಯೊಳಗೆ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಶೇಷ ತಂಡಗಳನ್ನು ರಚಿಸಲಾಗುವುದು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ಮಹಿಳೆಯರ ರಕ್ಷಣೆಗಾಗಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ಆರು ವಿಶೇಷ ತಂಡಗಳು ಹಾಗೂ ನಾಲ್ಕು ಪಿಂಕ್ ಗರುಡಾ ತಂಡಗಳನ್ನು ನಿಯೋಜಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಐದು ಸಂಚಾರಿ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಕಾರ್ಯಪಡೆಯು ನಗರದ ಎಲ್ಲಾ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿ ಇರುತ್ತದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.

ಮಾರ್ಗಸೂಚಿಯಲ್ಲಿರುವ ಅಂಶಗಳು
1. ದೊಡ್ಡ ಕಾರ್ಯಕ್ರಮಗಳನ್ನು ಹೊರಾಂಗಣ ಹಾಗೂ ಹಗಲಿನಲ್ಲಿ ಮಾತ್ರ ನಡೆಸಬೇಕು.
2. ಹೋಟೆಲ್, ಪಬ್, ರೆಸ್ಟೋರೆಂಟ್ ಮತ್ತು ರೆಸಾರ್ಟ್‌ಗಳು ಒಳಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮ ನಿಗದಿತ ಸೀಟುಗಳ ಸಾಮರ್ಥ್ಯ ಮೀರಬಾರದು.
3. ಜನಸಂದಣಿ ಹೆಚ್ಚಾಗದಂತೆ ಕ್ರಮಕೈಗೊಳ್ಳಬೇಕು.
4. ತುರ್ತು ಪರಿಸ್ಥಿತಿ ಎದುರಿಸಲು ತುರ್ತು ಚಿಕಿತ್ಸಾ ವಾಹನದ ವ್ಯವಸ್ಥೆ, ಆಸ್ಪತ್ರೆಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕು.
5. ರೆಸ್ಟೋರೆಂಟ್ ಮತ್ತು ಮದ್ಯ ಸರಬರಾಜು ಮಾಡುವ ಹೋಟೆಲ್‌ಗಳಲ್ಲಿ ಅಬಕಾರಿ ಇಲಾಖೆಯಿಂದ ಲಿಖಿತವಾಗಿ ಹೆಚ್ಚಿನ ಅವಧಿಗೆ ಅನುಮತಿ ಪಡೆಯಬೇಕು. ಪೊಲೀಸ್ ಆಯುಕ್ತರ ಕಚೇರಿಯಿಂದಲೂ ಅನುಮತಿ ಪಡೆಯುವುದು ಅವಶ್ಯಕವಾಗಿದೆ.
6. ಪ್ರವೇಶ ದ್ವಾರ/ಕಚೇರಿ/ಮಾಲ್‌ಗಳಲ್ಲಿ "ಮಾಸ್ಕ್ ಇಲ್ಲದೇ ಪ್ರವೇಶ ಇಲ್ಲ" ಎಂಬ ಸೂಚನಾ ಫಲಕವನ್ನು ಅಳವಡಿಸಬೇಕು.
7. ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
8. ಕಾರ್ಯಕ್ರಮದ ಸಂಘಟಕರು ಕೋವಿಡ್-19 ಬೂಸ್ಟರ್ ಡೋಸ್ ಪಡೆದಿರಬೇಕು ಅಥವಾ ಎರಡು ಡೋಸ್ ಲಸಿಕೆಯನ್ನಾದರೂ ಪಡೆದಿರಬೇಕು.

ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ
ಡಿಸೆಂಬರ್ 31ರಂದು ರಾತ್ರಿ 7ರ ಬಳಿಕ ಚಾಮುಂಡಿ ಬೆಟ್ಟಕ್ಕೆ ಉತ್ತನಹಳ್ಳಿ ಕ್ರಾಸ್ ಗೇಟ್, ದೈವಿ ವನ ಗೇಟ್, ಚಾಮುಂಡಿಬೆಟ್ಟ ಪಾದದ ಗೇಟ್, ಲಲಿತಮಹಲ್ ಗೇಟ್ ಮೂಲಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ತಾವರೆಕಟ್ಟೆ ಗೇಟ್ ಮುಖಾಂತರ ಡಿಸೆಂಬರ್ 31 ರಾತ್ರಿ 9 ಗಂಟೆ ಬಳಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬೆಟ್ಟಕ್ಕೆ ಊಟ, ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗುವುದನ್ನು ಕೂಡ ನಿಷೇಧಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications