ಮೈಸೂರಿನ ಇಎಸ್ ಐ ಆಸ್ಪತ್ರೆ ಬಳಿ ಅಪಾರ ಪ್ರಮಾಣದ ನೀರು ಪೋಲು
ಮೈಸೂರು, ಡಿಸೆಂಬರ್ 19 : ಮೈಸೂರಿನ ಕೆಆರ್ಎಸ್ ರಸ್ತೆಯ ಇಎಸ್ ಐ ಆಸ್ಪತ್ರೆ ಬಳಿ ಮುಖ್ಯ ಕೊಳವೆಯ ವಾಲ್ ತುಂಡಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ. ಸುಮಾರು 30 ಅಡಿ ಎತ್ತರಕ್ಕೆ ರಭಸವಾಗಿ ಚಿಮ್ಮಿದ ನೀರು ಸನಿಹದಲ್ಲಿದ್ದ ವಿದ್ಯುತ್ ತಂತಿ ದಾಟಿ ಹೋಗಿತ್ತು.
ಬೆಳಗೊಳ ಪಂಪ್ ಹೌಸ್‌ನಿಂದ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರಕ್ಕೆ ನೀರು ಪೂರೈಕೆ ಮಾಡುವ ಕೊಳವೆ ಇದಾಗಿದೆ. ಕಾಲುವೆ ಬಳಿ ಜೆಸಿಬಿ ಯಂತ್ರದಲ್ಲಿ ಮಣ್ಣು ಅಗೆಯುತ್ತಿದ್ದಾಗ ವಾಲ್ ತುಂಡಾಗಿದೆ. ಅವಘಡ ಸಂಭವಿಸಿದ ಸ್ಥಳದ ಬಳಿಯೇ ಟ್ರಾನ್ಸ್ ಫಾರ್ಮರ್, ವಿದ್ಯುತ್ ಲೈನ್ ಇದ್ದ ಕಾರಣ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದರು.
ಸ್ಥಳಕ್ಕೆ ಬಂದ ಸೆಸ್ಕ್ ಸಿಬ್ಬಂದಿ ವಿದ್ಯುತ್ ಪೂರೈಕೆ ಕಡಿತಗೊಳಿಸಿದರು. ಸುಮಾರು ಒಂದೂವರೆ ಗಂಟೆ ವಿಪರೀತವಾಗಿ ನೀರು ಪೋಲಾಗುವುದನ್ನು ಕಂಡ ಸಾರ್ವಜನಿಕರು ಪಂಪ್ ಹೌಸ್‌ಗೆ ಮಾಹಿತಿ ನೀಡಿದ್ದಾರೆ. ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರದ ಎಂಜಿನಿಯರ್‌ಗಳು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದುರಸ್ತಿ ಕಾರ್ಯ ಕೈಗೊಂಡರು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಸುಮಾರು 40 ಲಕ್ಷಕ್ಕೂ ಹೆಚ್ಚು ಲೀಟರ್ ನೀರು ವ್ಯರ್ಥವಾಗಿ ಚರಂಡಿಯಲ್ಲಿ ಹರಿದು ಹೋಗಿದೆ. ಹೊಸ ವಾಲ್ ಅಳವಡಿಸಿ ನೀರು ನಿಲ್ಲಿಸಲಾಯಿತು ಎಂದು ಕಾರ್ಯಾಗಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರಪ್ಪ ಮಾಹಿತಿ ನೀಡಿದರು.
ತೆಂಗಿನ ಮರದೆತ್ತರಕ್ಕೆ ಚಿಮ್ಮಿದ ನೀರಿನ ಚಿಲುಮೆ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.












Click it and Unblock the Notifications