ಮೈಸೂರು; ಪತ್ನಿ ವರ್ತನೆಗೆ ಮನನೊಂದು ವಿಡಿಯೋ ಮಾಡಿ ಆತ್ಮಹತ್ಯೆ
ಮೈಸೂರು, ನವೆಂಬರ್ 5: ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ಕುಟುಂಬಸ್ಥರೇ ಕಾರಣ ಎಂದು ಹೇಳಿ ಸೆಲ್ಫಿ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ನ.4ರ ಬುಧವಾರ ಇಲ್ಲಿನ ಟಿ.ಕೆ.ಬಡಾವಣೆಯಲ್ಲಿ ನಡೆದಿದೆ.
ಮೃತನನ್ನು ಟಿ.ಕೆ.ಬಡಾವಣೆಯ ನಿವಾಸಿ ನಾಗರಾಜ್ (42) ಎಂದು ಗುರುತಿಸಲಾಗಿದೆ. ಎಂಟು ವರ್ಷದ ಹಿಂದೆ ನಂಜನಗೂಡಿನ ಮಂಜುಳಾ ಎಂಬುವರನ್ನು ಪ್ರೇಮಿಸಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದರು. ಇತ್ತೀಚೆಗೆ ಇವರ ಪತ್ನಿಯು ತಾಯಿ ನಾಗಮ್ಮ, ಸಹೋದರರಾದ ಮಣಿಕಂಠ, ಸುಂದರ, ಸ್ನೇಹಿತೆ ನಾಗಮಣಿ ಅವರೊಂದಿಗೆ ಸೇರಿ ಊರಿನಲ್ಲಿರುವ ಆಸ್ತಿಯಲ್ಲಿ ಪಾಲು ಕೊಡಿಸಬೇಕು ಎಂದು ಕಿರುಕುಳ ನೀಡಲು ಆರಂಭಿಸಿದ್ದರು ಎಂದು ನಾಗರಾಜ್ ಆರೋಪಿಸಿದ್ದಾರೆ.

ನೀನು ನೋಡಲು ಸುಂದರವಾಗಿಲ್ಲ. ಬೇರೊಬ್ಬನನ್ನು ವಿವಾಹವಾಗುತ್ತೇನೆ ಎಂದು ಮಂಜುಳಾ ಪದೇ ಪದೇ ಹೇಳುತ್ತಿದ್ದಳು ಎಂದು ನಾಗರಾಜ್ ಅವರ ತಾಯಿ ಕಾಂತಮ್ಮ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಾಗರಾಜು ತಾಯಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ವಿಡಿಯೋವನ್ನು ಆಧರಿಸಿ ಹೆಂಡತಿ ಮಂಜುಳಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications