ಹೊಸ ವರ್ಷ: ಅಬಕಾರಿ ಇಲಾಖೆಗೆ ಹರಿದು ಬಂತು ದುಪ್ಪಟ್ಟು ಆದಾಯ
ಮೈಸೂರು, ಜನವರಿ 02: ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಕೇವಲ ಒಂದು ತಿಂಗಳಲ್ಲಿ ನಿರೀಕ್ಷೆಗೂ ಮೀರಿ ಮದ್ಯ ಮತ್ತು ಬಿಯರ್ ಮಾರಾಟವಾಗಿದೆ.
ಕ್ರಿಸ್‌ಮಸ್ ಸೇರಿದಂತೆ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮದ್ಯದ ಹೊಳೆಯೇ ಹರಿದಿದೆ. ಡಿ.31ರ ಸಂಜೆಯಿಂದ ಮಧ್ಯರಾತ್ರಿ ವರೆಗೆ ನಡೆಯುವ ಹೊಸ ವರ್ಷದ ಸಂಭ್ರಮಾಚರಣೆಯಲ್ಲೂ ಮದ್ಯದ ಹೊಳೆಯೇ ಹರಿದಿದೆ. ಅಬಕಾರಿ ಇಲಾಖೆ ಹಾಗೂ ಮದ್ಯವರ್ತಕರ ಸಂಘದ ಮೂಲಗಳ ಪ್ರಕಾರ ಮೈಸೂರು ಜಿಲ್ಲೆಯಲ್ಲಿಯೇ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಅಂದಾಜು 15 ಕೋಟಿ ರೂ. ಮೌಲ್ಯದ ಮದ್ಯ ಪೂರೈಕೆಯಾಗಿದೆ ಎಂದು ತಿಳಿದು ಬಂದಿದೆ.

ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ 3,23,428 ಬಾಕ್ಸ್ (ಒಂದು ಬಾಕ್ಸ್‌ನಲ್ಲಿ 9ಲೀ.)ಮದ್ಯ, 2,04,032 ಬಾಕ್ಸ್ (ಒಂದು ಬಾಕ್ಸ್‌ನಲ್ಲಿ 7.8 ಲೀ.)ಬಿಯರ್ ಮಾರಾಟವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ.
ರಾಜ್ಯದಲ್ಲಿ ದಾಖಲೆ ಆದಾಯ: ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 400 ಕೋಟಿ ರೂಪಾಯಿಗೂ ಹೆಚ್ಚು ಮದ್ಯ ಮತ್ತು ಬಿಯರ್ ಮಾರಾಟವಾಗಿರುವುದು ದಾಖಲೆಯಾಗಿದೆ. ರಾಜ್ಯದಲ್ಲಿ ಕಳೆದ ಡಿಸೆಂಬರ್‌ನಲ್ಲಿ 64.35 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ನಲ್ಲಿ 9ಲೀ.)ಮದ್ಯ ಮಾರಾಟವಾಗಿದ್ದರೆ, 41.76 ಲಕ್ಷ ಬಿಯರ್ ಬಾಕ್ಸ್ (ಒಂದು ಬಾಕ್ಸ್‌ನಲ್ಲಿ 7.8 ಲೀ.)ಮಾರಾಟವಾಗಿದೆ.
2022ರ ಡಿಸೆಂಬರ್‌ನಲ್ಲಿ 63.35 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿತ್ತು. ಜತೆಗೆ 36.03 ಲಕ್ಷ ಬಿಯರ್ ಬಾಕ್ಸ್ ಮಾರಾಟವಾಗಿತ್ತುಘಿ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಒಂದೇ ತಿಂಗಳಲ್ಲಿ ಹೆಚ್ಚುವರಿಯಾಗಿ 1 ಲಕ್ಷ ಮದ್ಯದ ಬಾಕ್ಸ್ ಮತ್ತು 5.73 ಲಕ್ಷ ಬಿಯರ್ ಬಾಕ್ಸ್ ಮಾರಾಟವಾಗಿದೆ.
ಕಳೆದ ವರ್ಷ 2612 ಕೋಟಿ ರೂ. ಆದಾಯ ಬಂದಿದ್ದರೆ ಈ ಬಾರಿ ಡಿಸೆಂಬರ್‌ನಲ್ಲಿ 3,000 ಕೋಟಿ ರೂ. ಆದಾಯ ಬಂದಿದೆ. ಕಳೆದ ಬಾರಿಗಿಂತ 388 ಕೋಟಿ ರೂ. ಹೆಚ್ಚಿನ ಆದಾಯ ಅಬಕಾರಿ ಇಲಾಖೆಗೆ ಬಂದಿದೆ ಎನ್ನುತ್ತಾರೆ ಅಬಕಾರಿ ಇಲಾಖೆಯ ಅಂಕಿ ಅಂಶ ವಿಭಾಗದ ಜಂಟಿ ನಿರ್ದೇಶಕ ಶಿವಯ್ಯ.












Click it and Unblock the Notifications