ಕೆಲವೇ ದಿನಗಳಲ್ಲಿ ಮೈಸೂರು–ಕೊಚ್ಚಿ ವಿಮಾನ ಸೇವೆ ಆರಂಭ
ಮೈಸೂರು, ಏಪ್ರಿಲ್ 1:ಪ್ರತಿಷ್ಠಿತ ಉಡಾನ್-3 ಯೋಜನೆಯಡಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಇನ್ನೇನು ಕೆಲವೇ ದಿನಗಳಲ್ಲಿ ವಿಮಾನಯಾನ ಸಂಪರ್ಕ ಆರಂಭವಾಗಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆಯು ಕಡಿಮೆ ದರದಲ್ಲಿ ಈ ಸೇವೆ ಒದಗಿಸಲು ಮುಂದಾಗಿದೆ. ಮಂಗಳವಾರ ಹೊರತುಪಡಿಸಿ ವಾರದಲ್ಲಿ 6 ದಿನ ಈ ವಿಮಾನ ಕಾರ್ಯಾಚರಣೆ ನಡೆಸಲಿದೆ.
ಈ ವಿಚಾರವನ್ನು ಸಂಸದ ಪ್ರತಾಪ ಸಿಂಹ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಈ ಸೇವೆ ಒದಗಿಸಲು ನಾಗರಿಕ ವಿಮಾನಯಾನ ಸಚಿವಾಲಯ ಜನವರಿಯಲ್ಲಿ ಅನುಮತಿ ನೀಡಿತ್ತು. ಇದರೊಂದಿಗೆ ಪ್ರವಾಸಿಗಳ ಸ್ವರ್ಗ ಕೇರಳ ರಾಜ್ಯದೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ವಾಯುಯಾನ ಸಂಪರ್ಕ ಏರ್ಪಡಲಿದೆ.

ಸಾಮಾನ್ಯರಿಗೆ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸುವ ಯೋಜನೆಯಡಿ ಈಗಾಗಲೇ 72 ಆಸನಗಳ ಟ್ರೂಜೆಟ್ ವಿಮಾನ ಚೆನ್ನೈ- ಮೈಸೂರು ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗುತ್ತಿದೆ.
'ಉಡಾನ್-3' ಯೋಜನೆಯಡಿ ಮೈಸೂರಿನಿಂದ ಪ್ರಮುಖ ನಗರಗಳಿಗೆ ಅಗ್ಗದ ವಿಮಾನಯಾನ ಸೇವೆ ಕಲ್ಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಕೊಚ್ಚಿ, ಚೆನ್ನೈ ಅಲ್ಲದೇ ಬೆಳಗಾವಿ, ಹೈದರಾಬಾದ್ (ಎರಡು ವಿಮಾನ), ಗೋವಾ (ಪಣಜಿ), ಬೆಂಗಳೂರಿಗೆ ಸದ್ಯದಲ್ಲೇ ವಿಮಾನಯಾನ ಸೇವೆ ಕಲ್ಪಿಸಲಾಗುತ್ತದೆ.
72 ಆಸನಗಳ ವಿಮಾನ ಹಾರಾಟ ನಿನ್ನೆ ( ಮಾರ್ಚ್ 31) ರಂದು ಆರಂಭವಾಗಿದೆ. ಮೊದಲ ವಿಮಾನ ಎಟಿಆರ್ 72 (91891/982) ರಾತ್ರಿ 8.35ಕ್ಕೆ ಹಾರಾಟ ಆರಂಭಿಸಿತು. ಕೊಚ್ಚಿನ್ ನಿಂದ ರಾತ್ರಿ 8ಕ್ಕೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಮಾ.31ರಿಂದ 26ರವರೆಗೆ ಈ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಅಲಯನ್ಸ್ ಏರ್ ಮೂಲಗಳು ತಿಳಿಸಿವೆ.












Click it and Unblock the Notifications