ಮೈಸೂರಿನಲ್ಲಿ ನರೇಂದ್ರ ಮೋದಿ ಸಿಂಹ ಘರ್ಜನೆ
ಮೈಸೂರು, ಏ.8 : ಮೈಸೂರಿನಲ್ಲಿ ಭಾರತ ವಿಜಯ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಮಹಾತ್ಮ ಗಾಂಧಿ ಅವರ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ದೇಶದಿಂದ ತೊಲಗಿಸಿ ಎಂದು ಜನರಿಗೆ ಕರೆ ನೀಡಿದ್ದಾರೆ. ದೇಶದಲ್ಲಿ ಬಿಜೆಪಿಗೆ 300ಕ್ಕಿಂತಲೂ ಅಧಿಕ ಸ್ಥಾನ ನೀಡುವಂತೆ ಮನವಿ ಮಾಡಿದ ಅವರು, ರಾಜ್ಯದಲ್ಲಿಯೂ ಪಕ್ಷವನ್ನು ಬೆಂಬಲಿಸುವಂತೆ ಕೋರಿದ್ದಾರೆ.
ಮಂಗಳವಾರ ಸಂಜೆ ಸಂಜೆ 5.15ಕ್ಕೆ ಮೋದಿ ಮೈಸೂರಿಗೆ ಆಗಮಿಸಿದರು, ಕನ್ನಡದಲ್ಲಿ ರಾಮನವಮಿ ಶುಭಾಶಯ ಹೇಳಿ ಮೋದಿ ತಮ್ಮ ಭಾಷಣವನ್ನು ಆರಂಭಿಸಿದರು. ಕಾಂಗ್ರೆಸ್ ವಿರುದ್ಧ ಕಟು ಶಬ್ದಗಳಿಂದ ಟೀಕೆ ಮಾಡಿದ ಅವರು, ಮೈಸೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಮೋದಿ ಭಾಷಣದ ಮುಖ್ಯಾಂಶಗಳು
* ಕನ್ನಡದಲ್ಲಿ ರಾಮನವಮಿ ಶುಭಾಶಯ ಕೋರಿದ ಮೋದಿ, ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಇಂತಹ ವಾತಾವರಣವನ್ನು ಕಾಂಗ್ರೆಸ್ ನಿರ್ಮಿಸಿದೆ ಎಂದು ದೂರಿದರು. ಹಗರಣಗಳಲ್ಲಿ ಮುಳುಗಿ ಹೋಗಿರುವುದೇ ಯುಪಿಎ ಸರ್ಕಾರದ 10 ವರ್ಷಗಳ ಸಾಧನೆ ಎಂದು ಕುಟುಕಿದರು.
* ಭ್ರಷ್ಟಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದ ಮೋದಿ, ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ಅವರ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ ಎಂದರು. ನನಗೆ ಕೇವಲ 7 ತಿಂಗಳ ಅಧಿಕಾರ ನೀಡಿ, 7 ವರ್ಷದ ದುರಾಡಳಿತವನ್ನು ತೊಲಗಿಸುತ್ತೇನೆ ಎಂದು ಮೋದಿ ಹೇಳಿದರು. [ಮೋದಿ ಕೊಪ್ಪಳದಲ್ಲಿ ಹೇಳಿದ್ದೇನು]
* ದೇಶದಲ್ಲಿ ಲೋಕಸಭೆ ಚುನಾವಣೆ ಆರಂಭವಾಗಿದೆ. ಮೈಸೂರಿನ ನೆಲೆದಿಂದ ನಾನು ದೇಶದ ಜನರಿಗೆ ಕರೆ ನೀಡುತ್ತಿದ್ದೇನೆ. ನಿಮ್ಮ ಮನದಲ್ಲಿ ಮತ್ತು ಆಲೋಚನೆಯಲ್ಲಿರುವ ಕಮಲ ಚುನಾವಣೆ ದಿನ ದಿನ ಬೆರಳಿಗೆ ಬರಲಿ, ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತಾಗಲಿ ಎಂದರು.
* ದೇಶದ ಚುನಾವಣೆಗೆ ಬೇಕಾದ ಶಾಹಿಯನ್ನು ನೀವು ತಯಾರಿಸುತ್ತೀರಿ. ಆದ್ದರಿಂದ ಬಿಜೆಪಿಯನ್ನು ಗೆಲ್ಲಿಸಿ ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸುವ ಆಲೋಚನೆಯೂ ಮೈಸೂರಿನ ಮಣ್ಣಿನಿಂದಲೇ ಆರಂಭವಾಗಲಿ ಎಂದು ಮೋದಿ ಕರೆ ನೀಡಿದರು.
* ಮೈಸೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಇದರಿಂದ ಯುವಜನರಿಗೆ, ಬಡವರಿಗೆ ಉದ್ಯೋಗ ದೊರೆಯುತ್ತದೆ. ನಮಗೆ ಬೆಂಬಲ ನೀಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯ ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿದರು.
* ದೇಶದಲ್ಲಿ ನಮಗೆ 300ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಿ ಎಂದು ಮನವಿ ಮಾಡಿದ ಮೋದಿ, ಮೈಸೂರು ಅಭ್ಯರ್ಥಿ ಪ್ರತಾಪ್ ಸಿಂಹ, ಚಾಮರಾಜನಗರದ ಕೃಷ್ಣಮೂರ್ತಿ ಮತ್ತು ಮಂಡ್ಯದ ಅಭ್ಯರ್ಥಿ ಬಿ.ಶಿವಲಿಂಗಯ್ಯ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.


Click it and Unblock the Notifications
