ಮೈಸೂರು ಮೇಯರ್ ಚುನಾವಣೆ: ಅಧಿಕಾರದ ಚುಕ್ಕಾಣಿಗೆ ಮೂರೂ ಪಕ್ಷಗಳ ಕಸರತ್ತು

ಮೈಸೂರು, ಆಗಸ್ಟ್ 24: ಮಹಾಮಾರಿ ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಪಾಲಿಕೆ ಅಧಿಕಾರದ ಗದ್ದುಗೆ ಏರಲು ಮೂರು ಪಕ್ಷಗಳು ತೆರೆಮರೆಯಲ್ಲಿ ರಾಜಕೀಯ ರಣತಂತ್ರ ರೂಪಿಸಿಕೊಂಡಿವೆ.

ಈ ಹಿಂದೆ ಜೆಡಿಎಸ್- ಕಾಂಗ್ರೆಸ್ ಮೈತ್ರಿಯೊಂದಿಗೆ ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್ ಸ್ಥಾನ ತೆರವಾಗಿದ್ದು, ಹೀಗಾಗಿ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ. ಹೀಗಾಗಿ ಸಾಂಸ್ಕೃತಿಕ ನಗರಿಯ ಮೇಯರ್ ಚುನಾವಣೆ ರೋಚಕ ಹಂತಕ್ಕೆ ತಲುಪಿದ್ದು, ಅಂತಿಮವಾಗಿ ಯಾರಿಗೆ ಮೇಯರ್ ಪಟ್ಟ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದ್ದು, ಈ ಎಲ್ಲಾ ಕುತೂಹಲಕ್ಕೆ ನಾಳೆ (ಆ.25)ರಂದು ತೆರೆ ಬೀಳಲಿದೆ.

 ಮೂರು ಪಕ್ಷಗಳಲ್ಲೂ ಕಸರತ್ತು

ಮೂರು ಪಕ್ಷಗಳಲ್ಲೂ ಕಸರತ್ತು

ಮೈಸೂರು ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪಕ್ಷಗಳು ಸಹ ಭಾರೀ ಪೈಪೋಟಿ ನಡೆಸುತ್ತಿವೆ. ಈ ಹಿಂದೆ ದೋಸ್ತಿಯೊಂದಿಗೆ ಪಾಲಿಕೆ ಆಡಳಿತ ಮುಡಿಗೇರಿಸಿಕೊಂಡಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಬಾರಿಯೂ ಅಧಿಕಾರದ ಕುರ್ಚಿ ಏರುವ ಲೆಕ್ಕಾಚಾರದಲ್ಲಿವೆ. ಮತ್ತೊಂದೆಡೆ ಬಿಜೆಪಿ ಸಹ ಮೇಯರ್ ಪಟ್ಟಕ್ಕೇರುವ ಮೂಲಕ ಮೈಸೂರು ಮಹಾನಗರ ಪಾಲಿಕೆಯಲ್ಲಿ ಇತಿಹಾಸ ಸೃಷ್ಟಿಸಲು ಹವಣಿಸುತ್ತಿದೆ. ಹೀಗಾಗಿ ಈ ಬಾರಿಯ ಮೇಯರ್ ಚುನಾವಣೆ ಕೂಡ ಕಳೆದ ಬಾರಿಯಂತೆ ಎಲ್ಲರ ಗಮನ ಸೆಳೆದಿದೆ.

 ಜೆಡಿಎಸ್ ನಿರ್ಧಾರವೇ ಅಂತಿಮ

ಜೆಡಿಎಸ್ ನಿರ್ಧಾರವೇ ಅಂತಿಮ

ಮೈಸೂರು ಮಹಾನಗರ ಪಾಲಿಕೆಯಲ್ಲಿ ಹೆಚ್ಚು ಸದಸ್ಯ ಬಲ ಹೊಂದಿರುವ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ. ಕಾಂಗ್ರೆಸ್ ಎರಡನೇ ದೊಡ್ಡ‌ ಪಕ್ಷವಾಗಿ ಗುರುತಿಸಿಕೊಂಡಿದೆ. ಆದರೆ ಮೇಯರ್ ಸ್ಥಾನಕ್ಕೇರಲು ಮ್ಯಾಜಿಕ್ ನಂಬರ್ 36ರ ಸದಸ್ಯ ಬಲದ ಅಗತ್ಯವಿರುವ ಹಿನ್ನೆಲೆಯಲ್ಲಿ ಎರಡು ಪಕ್ಷಗಳಿಗೂ ಜೆಡಿಎಸ್ ಜೊತೆಗಿನ ಮೈತ್ರಿ ಅನಿವಾರ್ಯವಾಗಿದೆ. ಹೀಗಾಗಿ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಹಿಂದೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದ ಜೆಡಿಎಸ್ ಒಪ್ಪಂದದಂತೆ ಮೇಯರ್ ಪಟ್ಟಕ್ಕೇರಿತ್ತು. ಆದರೆ ಮೇಯರ್ ಚುನಾವಣೆಯ ಬಳಿಕ ಸ್ಥಳೀಯವಾಗಿ ಮಾತ್ರವಲ್ಲದೇ ರಾಜ್ಯ ರಾಜಕೀಯದಲ್ಲೂ ಸಾಕಷ್ಟು ಬೆಳವಣಿಗೆಗಳು ನಡೆದಿರುವ ಪರಿಣಾಮ, ಜೆಡಿಎಸ್ ಈ ಹಿಂದಿನಂತೆ ಕಾಂಗ್ರೆಸ್ ಜೊತೆಗಿನ ದೋಸ್ತಿ ಮುಂದುವರಿಯುತ್ತಾ ಅಥವಾ ಬಿಜೆಪಿ ಜೊತೆ ಹೊಸ ಹೊಂದಾಣಿಕೆ ಮಾಡಿಕೊಳ್ಳುತ್ತಾ? ಎಂಬ ಅ‌ನುಮಾನ ಮೂಡಿದೆ.

 BJP ಅಧಿಕಾರಕ್ಕೇರಲು JDSಗೆ ಆಫರ್!

BJP ಅಧಿಕಾರಕ್ಕೇರಲು JDSಗೆ ಆಫರ್!

ರಾಷ್ಟ್ರ ಮತ್ತು ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಮೈಸೂರು ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ಆದರೆ ಈ ಬಾರಿ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಸ್ಥಳೀಯ ಬಿಜೆಪಿ ನಾಯಕರು, ಸುನಂದಾ ಪಾಲನೇತ್ರರನ್ನು ಮೇಯರ್ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ. ಇದಕ್ಕಾಗಿ JDS ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಜ್ಜಾಗಿರುವ ಬಿಜೆಪಿ, ಈ ವರ್ಷ ಮೇಯರ್ ಸ್ಥಾನ ಪಡೆದು, ಮುಂದಿನ ಎರಡು ಅವಧಿಗೂ ಜೆಡಿಎಸ್ ಪಕ್ಷಕ್ಕೆ ಮೇಯರ್ ಸ್ಥಾನ ಪಡೆಯುವಂತೆ ನೇರ ಆಫರ್ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಮೈತ್ರಿ ವಿಚಾರದಲ್ಲಿ ಈವರೆಗೂ ಯಾವುದೇ ನಿರ್ಧಾರ ಕೈಗೊಳ್ಳದ ಜೆಡಿಎಸ್ ಯೋಜನೆ ಇನ್ನು ನಿಗೂಢವಾಗಿದೆ. ಈ ನಡುವೆ ಮಂಗಳವಾರ ಸಂಜೆ ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಶಾಸಕ ಸಾ.ರಾ. ಮಹೇಶ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಮೇಯರ್ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕೆಂಬ ನಿರ್ಧಾರ ಕೈಗೊಳ್ಳಲಿದೆ.

 ಈ ಬಾರಿಯೂ JDSಗೆ ಮೇಯರ್ ಪಟ್ಟ?

ಈ ಬಾರಿಯೂ JDSಗೆ ಮೇಯರ್ ಪಟ್ಟ?

ಈ ನಡುವೆ ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಗುದ್ದಾಟದಲ್ಲಿ ಜೆಡಿಎಸ್ ಪಕ್ಷಕ್ಕೆ ಮತ್ತೆ ಅದೃಷ್ಟ ಒಲಿಯುತ್ತಾ? ಎಂಬ ಕುತೂಹಲ ಮೂಡಿದೆ. ಈ ಹಿಂದೆಯೂ ಇದೇ ತಂತ್ರಗಾರಿಕೆ ರೂಪಿಸಿದ್ದ JDS ಕೊನೆ ಕ್ಷಣದಲ್ಲಿ ಮೇಯರ್ ಪಟ್ಟಕ್ಕೇರುವಲ್ಲಿ ಯಶಸ್ಸು ಕಂಡಿತ್ತು. ಹೀಗಾಗಿ ಈ ಬಾರಿಯೂ ಸಹ ಜೆಡಿಎಸ್ ಮೇಯರ್ ಸ್ಥಾನಕ್ಕೇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಂದೊಮ್ಮೆ ಜೆಡಿಎಸ್ ಪಕ್ಷಕ್ಕೆ ಅದೃಷ್ಟ ಕೈಹಿಡಿದರೆ ಇಬ್ಬರು ಮೇಯರ್ ಸ್ಥಾನದ ಆಕಾಂಕ್ಷಿಗಳಿದ್ದು, ಈ ಪೈಕಿ ಅಶ್ವಿನಿ ಅನಂತುಗೆ ಮೇಯರ್ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದ್ದರೆ, ಇನ್ನು ಕಳೆದ ಮೂರು ವರ್ಷಗಳಿಂದಲೂ ಮೇಯರ್ ಆಗಲೇಬೇಕೆಂದು ಪ್ರಯತ್ನ ಮಾಡುತ್ತಲಿರುವ ಪ್ರೇಮಾ ಶಂಕರೇಗೌಡ ಸಹ ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ಇಬ್ಬರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಅನ್ನೋದು ಕೌತುಕ ಮೂಡಿಸಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಗುರಿ ಹೊಂದಿರುವ ಕಾಂಗ್ರೆಸ್, ಅಂತಿಮ ಕ್ಷಣದಲ್ಲಿ JDS ಜೊತೆ ಕೈಹಿಡಿದರೆ ದಳಪತಿಗಳಿಗೆ ಮೇಯರ್ ಸ್ಥಾನ ಸಿಗುವುದು ಬಹುತೇಕ ಖಚಿತ.

 ಕೊನೆಗೂ ಅಖಾಡಕ್ಕಿಳಿದ ಕೈ ಪಡೆ

ಕೊನೆಗೂ ಅಖಾಡಕ್ಕಿಳಿದ ಕೈ ಪಡೆ

ಕಳೆದ ಬಾರಿಯ ಮೇಯರ್ ಚುನಾವಣೆಯಲ್ಲಿ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಭಾರೀ ಕಸರತ್ತು ನಡೆಸಿದ್ದ ಕಾಂಗ್ರೆಸ್ ಈ ಬಾರಿ ಮೇಯರ್ ಚುನಾವಣೆ ಪ್ರಕ್ರಿಯೆ ಆರಂಭವಾದ ದಿನದಿಂದಲೂ ಯಾವುದೇ ನಿಲುವು ತೋರಿರಲಿಲ್ಲ. ಈ ನಡುವೆ ಮೇಯರ್ ಗದ್ದುಗೆ ಏರಲು ಜೆಡಿಎಸ್ ಹಾಗೂ ಬಿಜೆಪಿ ಒಂದಾಗುವ ಸೂಚನೆ ದೊರೆಯುತ್ತಿದ್ದಂತೆ, ಮೇಯರ್ ಚುನಾವಣೆಯ ಅಖಾಡಕ್ಕೆ ಕಾಂಗ್ರೆಸ್ ಎಂಟ್ರಿಕೊಟ್ಟಿದೆ. ಕಳೆದ ಬಾರಿಯ ಮೇಯರ್ ಎಲೆಕ್ಷನ್ ಸಂದರ್ಭದಲ್ಲಿ ಗೊಂದಲ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಸೈಲೆಂಟ್ ಆಗಿದ್ದ ಕಾಂಗ್ರೆಸ್ ನಾಯಕರು, ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಮಂಗಳವಾರ ಬೆಳಗ್ಗೆಯೇ ಸಭೆ ನಡೆಸಿದ್ದು, ಈ ಹಿಂದಿನ ಒಪ್ಪಂದದಂತೆ ಜೆಡಿಎಸ್ ಜೊತೆಗೆ ಮೈತ್ರಿ ಮುಂದುವರಿಸುವ ಪ್ಲ್ಯಾನ್ ರೂಪಿಸಿದೆ. ಇನ್ನು ಕಳೆದ ಬಾರಿಯಂತೆ ಕೊನೆಯ ಕ್ಷಣದಲ್ಲಿ ರಣತಂತ್ರ ರೂಪಿಸಿ ಇಡೀ ಮೇಯರ್ ಚುನಾವಣೆಯ ಚಿತ್ರಣವನ್ನೇ ಬದಲಿದ್ದ ಶಾಸಕ ತನ್ವಿರ್ ಸೇಠ್, ವರಿಷ್ಠರ ಸೂಚನೆಯಂತೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಅಂತಿಮವಾಗಿ ಯಾರಿಗೆ ಮೇಯರ್ ಪಟ್ಟ ಒಲಿಯಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+