ವಿದ್ಯುತ್ ಬೆಳಕಲ್ಲಿ ಮಿಂದೇಳುತ್ತಿರುವ ಮೈಸೂರು ನಗರಿ
ಮೈಸೂರು, ಸೆಪ್ಟೆಂಬರ್ 30; ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಮೈಸೂರು ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಗರದ ಎಲ್ಲಾ ರಸ್ತೆಗಳು, ಪಾರಂಪರಿಕ ಕಟ್ಟಡಗಳು, ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ.
ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಕಾಣುತ್ತಿದೆ. ಹಿಂದಿನ ರಾಜ ವೈಭವ ಮತ್ತೆ ಮರುಕಳಿಸಿದಂತೆ ಭಾಸವಾಗುತ್ತದೆ. ಜತೆಗೆ ನಿತ್ಯದ ಜಂಜಡವನ್ನು ಮರೆಸಿ ಒಂದು ಕ್ಷಣ ಮೈಮನ ಪುಳಕಿತವಾಗುವಂತೆ ಮಾಡುತ್ತಿದೆ. ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರುತ್ತಿರುವ ಜನ ಎಲ್ಲೆಡೆ ಸುತ್ತಾಡಿ ಕಣ್ತುಂಬಿಸಿಕೊಳ್ಳುತ್ತಿದ್ದಾರೆ.
ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಪ್ರಮುಖ ರಸ್ತೆಗಳು, ಝಗಮಗಿಸುವ ಅಂದದ ಅರಮನೆಯ ಮಹಲುಗಳು, ಮಂದ ಬೆಳಕಿನಲ್ಲಿ ಮಂದಸ್ಮಿತವಾಗಿ ಕಾಣುವ ಗುರುಮನೆಗಳು, ಹಸಿರು ದೀಪಾಲಂಕಾರ ಹೊತ್ತ ಉದ್ಯಾನವನಗಳು, ಕಪ್ಪುಬಣ್ಣದ ಭಿತ್ತಿಪತ್ರಗಳ ಮೇಲೆ ಬಣ್ಣಬಣ್ಣದ ಬೆಳಕಿನ ಚಿತ್ತಾರಗಳು ನವರಾತ್ರಿಯ ಸೊಬಗನ್ನು ಹೆಚ್ಚಿಸಿವೆ.

ಜಂಬೂಸವಾರಿ ಸಾಗುವ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಹೈವೇ ವೃತ್ತ ಮತ್ತು ಬನ್ನಿಮಂಟಪದ ರಸ್ತೆಗಳು ಮದುವಣಗಿತ್ತಿಯಂತೆ ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿವೆ. ಅದಲ್ಲದೆ ಅಂಬಾವಿಲಾಸ ಅರಮನೆ, ಲಲಿತ ಮಹಲ್, ಅರಮನೆ ದೇವರಾಜು ಅರಸು ರಸ್ತೆ, ರೈಲ್ವೆ ಸ್ಟೇಷನ್ ವೃತ್ತ, ಪಾರಂಪರಿಕ ಕಟ್ಟಡಗಳಾದ ಪುರಭವನ, ನಗರ ಪಾಲಿಕೆ ಕಟ್ಟಡ, ಮೂಡಾ, ನ್ಯಾಯಾಲಯ ಕಟ್ಟಡ, ಜಿಲ್ಲಾಧಿಕಾರಿ ಕಚೇರಿ, ಮೈಸೂರು ವಿವಿ ಸೇರಿದಂತೆ ಪ್ರಮುಖ ಪಾರಂಪರಿಕ ಕಟ್ಟಡಗಳಲ್ಲೂ ಬೆಳಕಿನ ಝಳ ತುಂಬಿದೆ.

ಇನ್ನು ಚಾಮುಂಡಿ ಬೆಟ್ಟದ ವೈಭವವನ್ನು ನವರಾತ್ರಿಯಲ್ಲಿ ನೋಡಲೇಬೇಕು. ಇದಕ್ಕಾಗಿಯೇ ಮೈಸೂರಿನಲ್ಲಿ ಕಾರನ್ನು ಬಿಟ್ಟು ಸ್ಕೂಟರ್ ಏರಿ, ಟಾಂಗಾ ಗಾಡಿ ಏರಿ ಒಂದು ಸುತ್ತು ನಗರ ಪ್ರದಕ್ಷಿಣೆ ಹಾಕಿದರೆ ಯಾವುದೋ ಬೇರೆ ಲೋಕದಲ್ಲಿ ಇರುವ ಅನುಭವವಾಗುತ್ತದೆ.












Click it and Unblock the Notifications