ಯೋಗ ದಿನವನ್ನು ಹಬ್ಬದಂತೆ ಆಚರಿಸಲು ಮೈಸೂರು ಜಿಲ್ಲಾಡಳಿತ ಸಜ್ಜು
ಮೈಸೂರು, ಜೂನ್ 19: ಮೈಸೂರು ಜಿಲ್ಲಾಡಳಿತವು ಈ ಬಾರಿ ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಗೆ ಸಜ್ಜಾಗಿದ್ದು, ಈ ದಿನವನ್ನು ಹಬ್ಬದಂತೆ ಆಚರಿಸಲು ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಯೋಗ ದಿನದಂದು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಇದಕ್ಕಾಗಿ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದು, ಮೈಸೂರು ನಗರದಿಂದ ರೇಸ್ ಕೋರ್ಸ್ ಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ ಮಾಡಲು ಮುಂದಾಗಿದ್ದೇವೆ. ಈ ಬಾರಿ ಎಲ್ಲಾ ಧರ್ಮ ಗುರುಗಳು ಭಾಗವಹಿಸಲಿದ್ದಾರೆ ಎಂದರು.
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲಾ ಇಲಾಖೆ ಅಧಿಕಾರಿಗಳೂ ಭಾಗವಹಿಸುವಂತೆ ತಿಳಿಸಲಾಗಿದೆ. ನಗರ ಬಸ್ ನಿಲ್ದಾಣ ಮತ್ತು ಪ್ರಮುಖ ವೃತ್ತಗಳಿಂದ 150ಕ್ಕೂ ಹೆಚ್ಚು ಬಸ್ ಸೌಲಭ್ಯ ಕಲ್ಪಿಸಲಾಗಿದೆ. 12 ಕಡೆಗಳಲ್ಲಿ 156 ಶೌಚಾಲಯ ವ್ಯವಸ್ಥೆ, 25 ಸ್ಥಳದಲ್ಲಿ ನೀರಿನ ಘಟಕಗಳು, ಮುಂಜಾಗ್ರತಾ ಕ್ರಮವಾಗಿ ವಿಶೇಷ ಆಂಬುಲೆನ್ಸ್ ವ್ಯವಸ್ಥೆ, ವಾಹನ ನಿಲುಗಡೆಗೆ 12 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಆ ದಿನದಂದು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಭದ್ರತೆ ದೃಷ್ಟಿಯಿಂದ 650 ಪೋಲಿಸರ ನಿಯೋಜನೆ ಮಾಡಲಾಗಿದ್ದು, ನಾಲ್ಕು ಬಾಂಬ್ ಸ್ಕ್ವಾಡ್ ಹಾಗೂ ಕೆಎಸ್ ಆರ್ ಪಿ ತುಕಡಿ, ಪ್ರವೇಶ ದ್ವಾರಗಳಲ್ಲಿ ಮೆಟೆಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ ಎಂದರು.












Click it and Unblock the Notifications