ಮೈಸೂರು ದಸರಾ ಹಬ್ಬದ ವೈಭವದ ಮಹೋತ್ಸವಕ್ಕೆ ಅದ್ಧೂರಿ ತೆರೆ
ಮೈಸೂರು, ಸೆಪ್ಟೆಂಬರ್ 30: ಅರಮನೆಯ ತುಂಬೆಲ್ಲಾ ರಂಗು ರಂಗಿನ ಚಿತ್ತಾರದಲ್ಲಿ ನೋಡಿದರಲ್ಲಿ ಹರ್ಷೋದ್ಘಾರದ ಕಲರವ,. ಮೈಸೂರು ದಸರಾ ಉತ್ಸವದ ಕೊನೆಯ ಆಕರ್ಷಣೆಯಾದ ವೈಭವದ ಜಂಬೂಸವಾರಿ ಸಾಂಸ್ಕೃತಿಕ ನಗರದಲ್ಲಿಂದು ಮುಗಿಲು ಮುಟ್ಟುವ ಸಂಭ್ರಮ ಮನೆ ಮಾಡಿತ್ತು. ಅರಮನೆ ನಗರಿ ಮೈಸೂರು, 407ನೇ ನಾಡಹಬ್ಬ ದಸರಾ ಮಹೋತ್ಸವವನ್ನು ಸಂಪನ್ನ ಗೊಡಿದೆ.
ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.15ಕ್ಕೆ ಶುಭಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಧ್ವಜಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ನಂತರ ಸಂಜೆ 4.45ಕ್ಕೆ ಅರಮನೆಯ ಮುಖ್ಯದ್ವಾರದಲ್ಲಿ ನಿರ್ಮಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ವಿದ್ಯುಕ್ತ ಚಾಲನೆ ನೀಡಿದರು.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿಗೆ ಚಾಲನೆ ನೀಡಿದರು. ಜಂಬೂಸವಾರಿಯಲ್ಲಿ ಸತತ 6ನೇ ಬಾರಿ 750 ಕೆಜಿ ಚಿನ್ನದ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನ ರಾಜ ಗಾಂಭೀರ್ಯದಿಂದ ಹೆಜ್ಜೆಹಾಕಿದ.
ಕುಮ್ಕಿ ಆನೆಗಳಾದ ಕಾವೇರಿ, ವರಲಕ್ಷ್ಮೀ -ಅರ್ಜುನನಿಗೆ ಸಾಥ್ ನೀಡಿದವು. ಅರ್ಜುನನ ನಾಯಕತ್ವದಲ್ಲಿ ಬಲರಾಮ, ವಿಕ್ರಮ, ವಿಜಯ, ಗಜೇಂದ್ರ, ಭೀಮ, ದ್ರೋಣ, ಹರ್ಷ, ಕೃಷ್ಣ, ದುರ್ಗಾಪರಮೇಶ್ವರಿ, ಗೋಪಿ, ಪ್ರಶಾಂತ ಆನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು.

ಮೆರವಣಿಗೆಯಲ್ಲಿ 40 ಕಲಾ ತಂಡಗಳು, 40 ಸ್ತಬ್ಧಚಿತ್ರಗಳು, ಅಶ್ವಾರೋಹಿದಳ, ಪೊಲೀಸ್ ಪಡೆ, ಸಾಲಂಕೃತ ನಿಶಾನೆ ಆನೆಗಳು ಭಾಗವಹಿಸಿದ್ದವು. ಚಿನ್ನದ ಅಂಬಾರಿ ಹೊತ್ತ ಅರ್ಜುನ ಅರಮನೆ ಆವರಣದಲ್ಲಿರುವ ಗಜ ಶಾಲೆಯಿಂದ ಕುಮ್ಕಿ ಆನೆಗಳಾದ ಕಾವೇರಿ, ವಿಜಯಲಕ್ಷ್ಮಿ ಅನೆಗಳೊಂದಿಗೆ ಆಗಮಿಸಿ ಅಂಬಾವಿಲಾಸ ಅರಮನೆ ಮುಂಭಾಗದ ವಿಶೇಷ ವೇದಿಕೆ ಬಳಿ ಬಂದು ನಿಲ್ಲುತ್ತಿದ್ದಂತೆ ಕುಶಾಲು ತೋಪುಗಳನ್ನು ಹಾರಿಸಲಾಯಿತು. ಅಶ್ವಾರೋಹಿ ದಳ, ಪೊಲೀಸ್ ರಕ್ಷಣಾ ದಳ ಕೆಎಸ್ಆರ್ ಪಿ, ನಗರ ಸಶಸ್ತ್ರ ಮೀಸಲು ದಳ ಪಥಸಂಚಲನ ನಡೆಸಿ ವಂದನೆ ಸಲ್ಲಿಸಿದರು.
ಮೈಸೂರು ಅರಮನೆಯಿಂದ ಜಯಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ, ಹೈವೇ ವೃತ್ತದ ಮೂಲಕ ಸುಮಾರು 6 ಕಿ.ಮೀ. ಸಾಗುವ ಜಂಬೂಸವಾರಿ ಬನ್ನಿಮಂಟಪ ಮೈದಾನದಲ್ಲಿ ಅಂತ್ಯಗೊಳ್ಳಲಿದೆ. ಜಂಬೂಸವಾರಿ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ನಿಂತು ದೇಶ-ವಿದೇಶಿ ಪ್ರವಾಸಿಗರು ಸೇರಿದಂತೆ ಸಹಸ್ರಾರು ಮಂದಿ ಈ ವೈಭವವನ್ನು ಕಣ್ತುಂಬಿಕೊಡರು.
ಮುಂದಿನ ದಸರೆಯು ನನ್ನ ನೇತೃತ್ವದಲ್ಲೇ: ಸಿಎಂ
ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಈ ಬಾರಿ ಎಲ್ಲೆಡೆ ಮಳೆಯಾಗಿದೆ. ಹೀಗಾಗಿ ಸಂಭ್ರಮದಿಂದ ದಸರಾ ಆಚರಿಸುತ್ತಿದ್ದೇವೆ. ಮಳೆಯಾಗಿರುವುದರಿಂದ ಕೆರೆಕಟ್ಟೆಗಳು ತುಂಬಿದ್ದು, ಜನರು ದಸರೆಯಲ್ಲಿ ಉತ್ಸಹದಿಂದ ಭಾಗವಹಿಸಿದ್ದಾರೆ ಎಂದು ತಿಳಿಸಿದರು.











Click it and Unblock the Notifications