ಚುನಾವಣೆ ಎದುರಿಸಲು ಸಜ್ಜಾಗುತ್ತಿದೆ ಮೈಸೂರು ಜಿಲ್ಲಾಡಳಿತ
ಮೈಸೂರು, ಫೆಬ್ರವರಿ 15 : ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಮತದಾರರ ಪಟ್ಟಿ ಪರಿಷ್ಕರಿಸುತ್ತಿದ್ದು, ಹೊಸದಾಗಿ 78,403 ಮಂದಿ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ತಿಳಿಸಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ಇದೇ ಫೆ. 28ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಇದುವರೆಗೆ ಕರಡು ಮತದಾರರ ಪಟ್ಟಿಯಲ್ಲಿ 23,69,987ಮಂದಿ ಮತದಾರರಿದ್ದು, ಹೊಸದಾಗಿ 78, 403 ಮಂದಿ ಸೇರ್ಪಡೆಯಾಗಿದ್ದಾರೆ. 16,664 ಮಂದಿಯನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಜಿಲ್ಲೆಯಲ್ಲಿ ಮತದಾನಕ್ಕೆ ಯೋಗ್ಯವಲ್ಲದ 43 ಮತಗಟ್ಟೆಗಳನ್ನು ಕೈಬಿಡಲಾಗಿದ್ದು, ಹೊಸದಾಗಿ 12 ಮತಗಟ್ಟೆಗಳನ್ನು ಸೇರ್ಪಡೆಗೊಳಿಸಲಾಗಿದೆ. 2017 ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಒಟ್ಟು 2, 687 ಮತಗಟ್ಟೆಗಳಿದ್ದವು. ಕೆಲವು ಮತಗಟ್ಟೆಗಳು ಮತದಾನಕ್ಕೆ ಯೋಗ್ಯವಾಗಿಲ್ಲವೆಂದು ಕಂಡು ಬಂದ ಕಾರಣ ಅವುಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಚಾಮುಂಡೇಶ್ವರಿಯಲ್ಲಿಯೇ ಹೆಚ್ಚು ಮತದಾರರು
ವರುಣಾದಲ್ಲಿ 3 ( 210532 ) , ಚಾಮರಾಜ 10 (220440), ಕೃಷ್ಣರಾಜ 5 (230427), ಚಾಮುಂಡೇಶ್ವರಿ 16 (277896) , ಹೆಚ್ ಡಿ ಕೋಟೆಯಲ್ಲಿ 7 ( 205782 ), ಪಿರಿಯಾಪಟ್ಟಣ 2 ( 174462 ) ಮತಗಟ್ಟೆಗಳನ್ನು ಬದಲಿಸಿ ಹೊಸದಾಗಿ 12 ಮತಗಟ್ಟೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಇತ್ತ ಕೆ. ಆರ್ ನಗರ 1,95,800, ಹುಣಸೂರು 219907, ನಂಜನಗೂಡು 1,99,562, ತಿ ನರಸೀಪುರ 1,91,856, ಎನ್ ಆರ್ ಕ್ಷೇತ್ರ 2,43,323 ದಲ್ಲಿ ಮತದಾರರಿದ್ದಾರೆ.
ಮತದಾರರ ಅಂತಿಮ ಪಟ್ಟಿ ಪ್ರಕಟವಾದ ಬಳಿಕ ಮಾರ್ಚ್ 1 ರಂದು, ನಿರಂತರ ಪರಿಷ್ಕರಣೆಯಲ್ಲಿ ಮತದಾರ ಪಟ್ಟಿಗೆ ಹೆಸರನ್ನು ಸೇರಿಸುವುದಕ್ಕೆ, ಕೈಬಿಡುವುದಕ್ಕೆ, ತಿದ್ದುಪಡಿ ಮತ್ತು ವರ್ಗಾವಣೆ ಮಾಡುವುದಕ್ಕೆ ಹಾಗೂ ನಿಗದಿತ ನಮೂನೆಯನ್ನು ಸಲ್ಲಿಸಲು ಅವಕಾಶವಿರುತ್ತದೆ.
ಮತಭದ್ರತೆಗಾಗಿ ವಿವಿ ಪ್ಯಾಟ್ ಸಜ್ಜು
ವಿದ್ಯುನ್ಮಾನ ಮತಯಂತ್ರ ಬಳಕೆ ಜಿಲ್ಲೆಯಲ್ಲಿ ಒಟ್ಟು 2687 ಮತಗಟ್ಟೆಗಳಿಗೆ ಅನುಗುಣವಾಗಿ ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್ ಸರಬರಾಜು ಮಾಡಲಾಗಿದೆ. 2330 ಬಿಇ ಲ್ ಸಂಸ್ಥಯಿಂದ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವೇರ್ ಹೌಸ್ ನಲ್ಲಿ ಇರಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಸಹ ಅಳವಡಿಸಲಾಗಿದೆ. ತಮಿಳುನಾಡಿನಿಂದ ಮೈಸೂರು ಜಿಲ್ಲೆಗೆ ಬ್ಯಾಲೆಟ್ ಯುನಿಟ್ ಮತ್ತು ಕಂಟ್ರೋಲ್ ಯೂನಿಟ್ ಗಳನ್ನು ಹಂಚಿಕೆ ಮಾಡಲಾಗಿದ್ದು, ಅವುಗಳನ್ನು ಪೊಲೀಸರು ಭದ್ರತೆಯಲ್ಲಿ ಇರಿಸಲಾಗಿದೆ.












Click it and Unblock the Notifications