ಮೈಸೂರು ದಸರಾ 2014 ಲಾಂಛನ ನೋಡಿ
ಮೈಸೂರು, ಆ.13 : ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ಚುರುಕುಗೊಂಡಿವೆ. ದಸರಾ ಮಹೋತ್ಸವದ 2014ನೇ ಸಾಲಿನ ಲಾಂಛನವನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಮೈಸೂರು ದಸರಾ ಬಗ್ಗೆ ಮಾಹಿತಿ ನೀಡುವ ವೆಬ್ ಸೈಟ್ ಎರಡು ದಿನಗಳಲ್ಲಿ ಉದ್ಘಾಟನೆಯಾಗಲಿದೆ.
ಮಂಗಳವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ 2014ನೇ ಸಾಲಿನ ದಸರಾ ಮಹೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ದಸರಾ ಮಹೋತ್ಸವವನ್ನು ಕಳೆದ ಬಾರಿಗಿಂತಲೂ ಆಕರ್ಷಣೀಯವಾಗಿ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ದಸರಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ವಿವಿಧ ಉಪಸಮಿತಿಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಉಪಸಮಿತಿ ರಚನೆ ಅಂತಿಮಗೊಳಿಸಲಾಗುವುದು ಎಂದು ಶ್ರೀನಿವಾಸ ಪ್ರಸಾದ್ ತಿಳಿಸಿದರು. ಗಣ್ಯರು, ರಾಜಮನೆತನದವರಿಗೆ ಅಧಿಕೃತ ಆಹ್ವಾನ ನೀಡಲು ಬುಧವಾರ ದಿನಾಂಕ ನಿಗದಿ ಮಾಡಲಾಗುವುದು ಎಂದರು. [ದಸರಾ ಫಲಪುಷ್ಪ ಪ್ರದರ್ಶನ ಎಲ್ಲಿ?]
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮಾತನಾಡಿ, ನಾಡಹಬ್ಬ ದಸರಾ ಮಹೋತ್ಸವದ ಕಾರ್ಯಕ್ರಮಗಳ ಕುರಿತಂತೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ವೆಬ್ ಸೈಟ್ ಆರಂಭಿಸಲಾಗಿದೆ. 3-4 ದಿನಗಳಲ್ಲಿ ಇದನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

14 ರಿಂದ ಗಜಪಯಣ : ಈ ಬಾರಿಯ ಮೈಸೂರು ದಸರಾದ ಗಜಪಯಣ ಆ.14ರಂದು ಆರಂಭಗೊಳ್ಳಲಿದೆ. ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಆರಂಭವಾಗಲಿದ್ದು, ಆ.16ರಂದು ಮೊದಲ ಗುಂಪಿನ ಆನೆಗಳ ತಂಡ ಮೈಸೂರಿಗೆ ಆಗಮಿಸಲಿದೆ. ಮೊದಲ ತಂಡದಲ್ಲಿ ಅರ್ಜುನ (56), ಬಲರಾಮ (58), ಅಭಿಮನ್ಯು (51), ಮೇರಿ (55), ಸರಳ (55), ಗಜೇಂದ್ರ (54) ಆನೆಗಳು ಮೈಸೂರಿಗೆ ಆಗಮಿಸಿಲಿವೆ.
ಉತ್ತರಾಧಿಕಾರಿ ಯಾರು? : ದಸರಾ ಉತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದರೂ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸುವ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಬಗೆಹರಿದಿಲ್ಲ. ಎರಡು ದಿನಗಳ ಹಿಂದೆ ವಿ.ಶ್ರೀನಿವಾಸ ಪ್ರಸಾದ್ ರಾಣಿ ಪ್ರಮೋದಾ ದೇವಿ ಅವರನ್ನು ಭೇಟಿ ಮಾಡಿ ಈ ಕುರಿತು ಮಾತುಕತೆ ನಡೆಸಿದ್ದಾರೆ. ಆದರೆ, ಯಾವುದೇ ನಿರ್ಧಾರ ಕೈಗೊಂಡಿಲ್ಲ. [ಅರಮನೆ ಸಂಕಷ್ಟ ನೆನೆದು ಕಣ್ಣೀರಿಟ್ಟ ಮೈಸೂರು ರಾಣಿ]












Click it and Unblock the Notifications