ಮುಡಾ ಸೈಟು ಹಂಚಿಕೆ ವಿವಾದ: ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿ ವಿರುದ್ಧ ದೂರು ದಾಖಲು
ದಿನೇ ದಿನೇ ಮುಡಾ ಹಗರಣ ವಿವಿಧ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಮೈಸೂರು ವಿಜಯನಗರ ಪೊಲೀಸ್ ಠಾಣೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮುಡಾಗೆ ವಂಚನೆ ಮಾಡಲಾಗಿದೆ ಎಂಬ ದೂರು ದಾಖಲಾಗಿದೆ.
ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ ಮತ್ತು ಭೂ ಮಾಲೀಕ ಎಂದು ಹೇಳುವ ದೇವರಾಜು ಹಾಗೂ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದಾರೆ. ಇದೇ ಪ್ರಕರಣದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಉಪ ನೋಂದಣಾಧಿಕಾರಿ ಹಾಗೂ ಮುಡಾ ಅಧಿಕಾರಿಗಳ ಶಾಮೀಲು ಬಗ್ಗೆಯು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರರು ದೂರು ದಾಖಲಿಸಿದ್ದಾರೆ. ಪೊಲೀಸರ ಜೊತೆಗೆ ರಾಜ್ಯಪಾಲ, ರಾಜ್ಯ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ.
ಸ್ನೇಹಮಯಿಕೃಷ್ಣ ದೂರಿನಲ್ಲಿ ಎತ್ತಿರುವ ಪ್ರಶ್ನೆಗಳಿವು
1. ಪಾರ್ವತಿ ಪ್ರಕರಣದಲ್ಲಿ ಭೂ ಸ್ವಾಧೀನದಿಂದ ಕೈಬಿಟ್ಟಿರುವ ರಾಜ್ಯಪತ್ರದ ಬಗ್ಗೆಯೇ ಅನುಮಾನ.
2. ಮೂಲ ಭೂ ಮಾಲೀಕರ ಮಗ ಎನ್ನುವ ದೇವರಾಜು ಅಸ್ತಿತ್ವದ ಬಗ್ಗೆ ಪ್ರಶ್ನೆ.
3. 1998ರಲ್ಲಿ ಭೂ ಸ್ವಾಧಿನದಿಂದ ಕೈ ಬಿಟ್ಟಿದ್ದು ನಿಜವಾದರೆ 2010ರ ವರೆಗಿನ ಆರ್ಟಿಸಿ ಗಳಲ್ಲಿ ಭೂ ಸ್ವಾಧೀನ ಎಂಬ ಉಲ್ಲೇಖ ಏಕಿದೆ.
4. ದೇವರಾಜು ಮತ್ತು ನಂತರ ಮಲ್ಲಿಕಾರ್ಜುನಸ್ವಾಮಿ ಅವರ ಮಾಲೀಕತ್ವ ಮತ್ತು ಸ್ವಾಧೀನದಲ್ಲಿ ಈ ಜಮೀನು ಇದ್ದಿದ್ದರೆ ಪ್ರಾಧಿಕಾರದ ಅಭಿವೃದ್ಧಿ ಕೆಲಸವನ್ನ ಏಕೆ ತಡೆದಿಲ್ಲ.
5. ಮಲ್ಲಿಕಾರ್ಜುನ ಹಾಗೂ ಪಾರ್ವತಿ ಅವರ ಹೆಸರಿಗೆ ಖಾತೆ ವರ್ಗಾವಣೆ ಮಾಡುವ ವೇಳೆ ಸ್ಥಳ ಪರಿಶೀಲನೆ ಮಾಡಲಿಲ್ವ.
6. ಮಾಡಿದ್ದರೆ ಮುಡಾ ಅಭಿವೃದ್ಧಿ ಮಾಡಿರುವುದು ಕಂಡುಬಂದಿದ್ದರೂ ಕೃಷಿ ಭೂಮಿ ಎಂದು ಹೇಗೆ ಖಾತೆ ಮಾಡಿದರು.
7. ನಿಜವಾದ ಭೂ ಮಾಲೀಕರ ವಂಶವೃಕ್ಷ, ಜವರ ಅವರ ಮರಣ ಪ್ರಮಾಣಪತ್ರ ಸೇರಿ ಹಲವು ದಾಖಲೆಗಳ ಉಲ್ಲೇಖ ಇಲ್ಲ ಯಾಕೆ.
8. ಕೆಸರೆ ಗ್ರಾಮದ 464ನೇ ಸರ್ವೆ ನಂಬರ್ನ 3.16 ಎಕರೆ ಭೂ ಭೂ ಸ್ವಾಧೀನ ಕೈ ಬಿಡಲು ಕಾರಣ ಏನು.
9. ಅಂತಹ ಯಾವ ಪ್ರಭಾವನ್ನು (ಕಾರಣವನ್ನು) ಜವರ ಬಳಸಿದ್ದರು.
10. 2005ರಲ್ಲೇ ಮಲ್ಲಿಕಾರ್ಜುನ ಸ್ವಾಮಿಗೆ ಅನ್ಯಕ್ರಾಂತ ಆಗಿದ್ದರೆ ಸದರಿ ಉಲ್ಲೇಖ ಆರ್ಟಿಸಿಗಳಲ್ಲಿ ಯಾಕೆ ಇಲ್ಲ.
11. 2004-05ನೇ ಸಾಲಿನ ಆರ್ ಟಿಸಿಯ ಕಲಂ 10ರಲ್ಲಿ 8/92-93 ಎಂಬ ಉಲ್ಲೇಖವಿದೆ. ಇದನ್ನು ಗಮನಿಸಿದಾಗ ಮಾರಪ್ಪ ಎಂಬುವವರಿಗೆ ಸೇರಿದ ದಾಖಲೆ ಎಂದು ಗೊತ್ತಾಗುತ್ತದೆ.
12. ಮಲ್ಲಿಕಾರ್ಜುನ ಸ್ವಾಮಿಗೆ ಭೂಮಿ ಮಾರಿರುವ ದೇವರಾಜು ಕುಟುಂಬದ ವಿಳಾಸವೇ ಅಸ್ತಿತ್ವದಲ್ಲಿ ಇಲ್ಲದಿರುವುದು ದೊಡ್ಡ ಅನುಮಾನ.
ಪ್ರಕರಣದಲ್ಲಿ ಇಷ್ಟೆಲ್ಲ ಅನುಮಾನ ಇದೆ. ಹೀಗಾಗಿ ಪ್ರಕರಣ ಸಮಗ್ರ ತನಿಖೆ ನಡೆಸಬೇಕು. 10 ದಿನಗಳ ಒಳಗೆ ಇದಕ್ಕೆ ಉತ್ತರ ಕೊಡಬೇಕು. ಇಲ್ಲವಾದರೆ ರಾಜ್ಯ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರರ್ಜಿ ದಾಖಲಿಸುತ್ತೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.












Click it and Unblock the Notifications