ನಂಜನಗೂಡು ಮ್ಯಾಗಿ ಉತ್ಪಾದನಾ ಘಟಕಕ್ಕೆ ಬೀಗ
ಮೈಸೂರು, ಜೂ. 06 : ನೆಸ್ಲೆ ಕಂಪನಿ ಭಾರತೀಯ ಮಾರುಕಟ್ಟೆಗಳಿಂದ ಮ್ಯಾಗಿ ಮಾರಾಟವನ್ನು ವಾಪಸ್ ಪಡೆದಿದೆ. ಇದರಿಂದ ನಂಜನಗೂಡಿನ ಘಟಕಕ್ಕೂ ಬೀಗ ಬಿದ್ದಿದೆ. ಪ್ರತಿನಿತ್ಯ 75 ಟನ್ ಮ್ಯಾಗಿ ಉತ್ಪಾದನೆಯಾಗುತ್ತಿದ್ದ ಘಟಕದಲ್ಲಿ ಸುಮಾರು 400 ನೌಕರರಿದ್ದಾರೆ.
ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೆಸ್ಲೆ ಕಂಪನಿ 1989ರಂದು ತನ್ನ ಘಟಕವನ್ನು ಆರಂಭಿಸಿತ್ತು. ಸುಮಾರು 85 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಕಾಫಿ ಉತ್ಪಾದನಾ ಘಟಕವಿದೆ. ಇದರ ಆವರಣದಲ್ಲಿಯೇ 2011 ರಿಂದ ಮ್ಯಾಗಿ ನೂಡಲ್ಸ್ ಉತ್ಪಾದನೆ ಆರಂಭಿಸಲಾಗಿತ್ತು. [ಮ್ಯಾಗಿ ಮಾರಾಟ ವಾಪಸ್ ಪಡೆದ ನೆಸ್ಲೆ ಕಂಪನಿ]

ಶುಕ್ರವಾರ ಮ್ಯಾಗಿ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ನೆಸ್ಲೆ ಹೇಳಿರುವ ಹಿನ್ನಲೆಯಲ್ಲಿ ಮ್ಯಾಗಿ ಉತ್ಪಾದನಾ ಘಟಕಕ್ಕೆ ಬೀಗ ಜಡಿಯಲಾಗಿದೆ. ಈ ಘಟಕದಲ್ಲಿ ತಯಾರಾಗುವ ಮ್ಯಾಗಿಯನ್ನು ದಕ್ಷಿಣ ಭಾರತದ ಕೆಲವು ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿತ್ತು. [ಬೆಂಗಳೂರಲ್ಲಿ ನ್ಯೂಡಲ್ಸ್ ವ್ಯಾಪಾರವೇನೂ ಕಡಿಮೆಯಾಗಿಲ್ಲ]
ದೇಶದಲ್ಲಿ ನೆಸ್ಲೆ 4 ಪ್ರಮುಖ ಘಟಕಗಳನ್ನು ಹೊಂದಿದ್ದು, ಅದರಲ್ಲಿ ನಂಜನಗೂಡಿನ ಘಟಕವೂ ಸೇರಿದೆ. ಸುಮಾರು 360 ಕೋಟಿ ರೂ. ಖರ್ಚು ಮಾಡಿ ನಂಜನಗೂಡಿನಲ್ಲಿ ಈ ಘಟಕ ನಿರ್ಮಿಸಲಾಗಿತ್ತು. ಇಲ್ಲಿ ಮ್ಯಾಗಿ ಉತ್ಪಾದನೆಯನ್ನು ಮಾತ್ರ ಸ್ಥಗಿತಗೊಳಿಸಲಾಗಿದ್ದು, ಕಾಫಿ ಉತ್ಪಾದನಾ ಘಟಕ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.












Click it and Unblock the Notifications