ಮೈಸೂರಿನ ಪ್ರತಿಷ್ಠಿತ ಹೋಟೆಲ್ ನಿರ್ವಹಣೆ ಖಾಸಗಿ ಕೈಗೆ, ಸರ್ಕಾರದ ಸಮ್ಮತಿ
ಮೈಸೂರು, ನವೆಂಬರ್ 30: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಷ್ಠಿತ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್‌ನ ನಿರ್ವಹಣೆ ಖಾಸಗಿ ಅವರ ಪಾಲಾಗಲಿದೆ. ಕರ್ನಾಟಕ ಸರ್ಕಾರ ಫೈವ್ ಸ್ಟಾರ್ ಹೋಟೆಲ್ ನಿರ್ವಹಣೆಯನ್ನು ಖಾಸಗಿ ಅವರಿಗೆ ನೀಡಲು ತೀರ್ಮಾನ ಕೈಗೊಂಡಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ. 2018ರಲ್ಲಿ ಹೋಟೆಲ್‌ನ ನಿರ್ವಹಣೆಯನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್‌ನ ನಿರ್ವಹಣೆ ಖಾಸಗಿ ಅವರಿಗೆ ನೀಡಲು ಟೆಂಡರ್ ಕರೆಯಲು ಒಪ್ಪಿಗೆಯನ್ನು ನೀಡಲಾಗಿದೆ. 1974 ರಿಂದ 2018ರ ತನಕ ಹೋಟೆಲ್ ಅನ್ನು ಅಶೋಕ್ ಗ್ರೂಪ್ ನಿರ್ವಹಣೆ ಮಾಡುತ್ತಿತ್ತು.

2018ರಲ್ಲಿ ರಾಜ್ಯ ಸರ್ಕಾರಕ್ಕೆ ಮೈಸೂರು ನಗರದ ಐಷಾರಾಮಿ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್‌ನ ನಿರ್ವಹಣೆ ನೀಡಲಾಯಿತು. ಸದ್ಯ ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಹೋಟೆಲ್‌ನ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಈಗ ಖಾಸಗಿ ಅವರಿಗೆ ನಿರ್ವಹಣೆ ನೀಡಲು ಸರ್ಕಾರ ಮುಂದಾಗಿದೆ.
1921ರಲ್ಲಿ ನಿರ್ಮಾಣ: 1921ರಲ್ಲಿ ನಿರ್ಮಾಣ ಮಾಡಲಾಗಿರುವ ಐತಿಹಾಸಿಕ ಹೋಟೆಲ್‌ನ ನಿರ್ವಹಣೆ ರಾಜ್ಯ ಸರ್ಕಾರದ ಪಾಲಿಗೆ ಹೊರೆಯಾಗಿದೆ. ಆದ್ದರಿಂದ ಖಾಸಗಿ ಅವರಿಗೆ ನಿರ್ವಹಣೆ ನೀಡಲು ಟೆಂಡರ್ ಕರೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ಕೊಟ್ಟಿದೆ. ಅಶೋಕ್ ಗ್ರೂಪ್ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪರವಾಗಿ ಹೋಟೆಲ್ ನಿರ್ವಹಣೆ ಮಾಡುತ್ತಿತ್ತು.
ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕಾನೂನು ಸಚಿವ ಹೆಚ್. ಕೆ. ಪಾಟೀಲ, "ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆ, ರಿಪೇರಿ, ಆಧುನೀಕರಣವನ್ನು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ನಿಂದ ಖಾಸಗಿಯವರಿಗೆ ನೀಡಲಾಗುತ್ತದೆ. ಐತಿಹಾಸಿಕ ಕಟ್ಟಡವನ್ನು ಹಾಗೆ ಉಳಿಸಿಕೊಂಡು ನಿರ್ವಹಣೆ ಮಾಡಲು ಟೆಂಡರ್ ಕರೆಯಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ" ಎಂದು ಹೇಳಿದರು.
"ಇದು ಬಹಳ ದೊಡ್ಡ ಹೋಟೆಲ್ ಆಗಿದ್ದು, ವಿಸ್ತಾರವಾದ ಜಾಗವನ್ನು ಹೊಂದಿದೆ. ಆದರೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಐಷಾರಾಮಿ ಹೋಟೆಲ್ ನಿರ್ವಹಣೆ ಸರ್ಕಾರಕ್ಕೆ ಹೊರೆಯಾಗಿದೆ. ಹೋಟೆಲ್ ಸೌಲಭ್ಯಗಳಿಗೆ ಯಾವುದೇ ಧಕ್ಕೆ ಬಾರದಂತೆ ನಿರ್ವಹಣೆಯನ್ನು ಖಾಸಗಿ ಅವರಿಗೆ ನೀಡಲಾಗುತ್ತದೆ" ಎಂದು ಸಚಿವರು ತಿಳಿಸಿದರು.
ಹೋಟೆಲ್ ನಿರ್ವಹಣೆಗೆ ಅಧಿಕ ವೆಚ್ಚವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಡಿಪಿಆರ್ ಪ್ರಕಾರವೇ 40 ರಿಂದ 50 ಕೋಟಿ ನಿರ್ವಹಣಾ ವೆಚ್ಚವಾಗಲಿದೆ. ಸದ್ಯ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ನಷ್ಟ ಮಾಡಿಕೊಂಡು ಹೋಟೆಲ್ ನಿರ್ವಹಣೆ ಮಾಡುತ್ತಿಲ್ಲ. ಆದರೆ ಲಾಭವೂ ಆಗುತ್ತಿಲ್ಲ.
1921ರಲ್ಲಿ ಮೈಸೂರು ಮಹಾರಾಜರು ಐಷಾರಾಮಿ ಲಲಿತಾ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ಮಾಣ ಮಾಡಿದರು. ಲಂಡನ್‌ನ ಅರಮನೆಯನ್ನು ಮಾದರಿಯಾಗಿ ಇಟ್ಟುಕೊಂಡು ಇದನ್ನು ನಿರ್ಮಾಣ ಮಾಡಲಾಯಿತು. ಮೈಸೂರು ನಗರದಲ್ಲಿ ಅರಮೆಯನ್ನು ಬಿಟ್ಟರೆ ಈ ಹೋಟೆಲ್ ಅತಿ ದೊಡ್ಡದಾದ ಸ್ಥಳವಾಗಿದೆ.
ಮೈಸೂರು ಮಹಾರಾಜರು ತಮ್ಮ ಅತಿಥಿ, ಭಾರತದ ವೈಸರಾಯ್ ಅವರಿಗೆ ಆತಿಥ್ಯ ನೀಡಲು ಈ ಹೋಟೆಲ್ ನಿರ್ಮಿಸಿದವರು. ಮೈಸೂರು ನಗರದ ಹೊರಗೆ ಅದ್ಭುತ ಇಟಾಲಿಯನ್ ಶೈಲಿಯಲ್ಲಿ ಹೋಟೆಲ್ ನಿರ್ಮಾಣ ಮಾಡಲಾಗಿದ್ದು, ಸುಂದರವಾದ ಉದ್ಯಾನ ಮತ್ತು ಆವರಣ ಸಹ ಗಮನ ಸೆಳೆಯುತ್ತದೆ. ಚಾಮುಂಡಿ ಬೆಟ್ಟದ ಕೆಳಭಾಗದಲ್ಲಿ ಇರುವ ಹೋಟೆಲ್, ಎರಡು ಅಂತಸ್ತನ್ನು ಹೊಂದಿದ್ದು, ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.












Click it and Unblock the Notifications