ಇನ್ಮುಂದೆ ಜಾಗತಿಕ ಮಟ್ಟದಲ್ಲಿ ಮಿಂಚಲಿದೆ ಸಾಂಸ್ಕೃತಿಕ ನಗರಿ: ಹೇಗಿದೆ ಬ್ರ್ಯಾಂಡ್ ಮೈಸೂರು ಲೋಗೋ..?
ಮೈಸೂರು, ಡಿಸೆಂಬರ್ 11: ಸಾಂಸ್ಕೃತಿಕ ನಗರಿ, ಅರಮನೆನಗರಿ, ಪಾರಂಪರಿಕನಗರಿ, ವಿಶ್ರಾಂತರ ಸ್ವರ್ಗ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಮೈಸೂರು ಪ್ರವಾಸಿಗರನ್ನು ಸದಾ ಸೆಳೆಯುತ್ತದೆ. ಇಲ್ಲಿರುವ ಪ್ರವಾಸಿ ತಾಣಗಳು ದೇಶ, ವಿದೇಶಗಳಲ್ಲಿ ತನ್ನ ಛಾಪು ಮೂಡಿಸಿದ್ದು, ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇದೀಗ ಪ್ರವಾಸೋದ್ಯಮ ಇಲಾಖೆ ಮೈಸೂರನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡಿಂಗ್ ಮಾಡಲು ಮುಂದಾಗಿರುವುದು ವಿಶೇಷವಾಗಿದೆ.
ಮೈಸೂರು ಭೌಗೋಳಿಕವಾಗಿಯೂ ಹಲವು ವಿಶೇಷತೆಯನ್ನು ಹೊಂದಿದೆ. ಇಲ್ಲಿನ ರಸಬಾಳೆ, ವೀಳ್ಯದೆಲೆ, ಮಲ್ಲಿಗೆ, ಸಿಹಿತಿನಿಸು ಮೈಸೂರು ಪಾಕ ದೇಶ ವಿದೇಶದಲ್ಲಿ ಗಮನಸೆಳೆದಿದೆ. ಮೈಸೂರು ಅರಮನೆಯಂತು ವಿಶ್ವವಿಖ್ಯಾತವಾಗಿದೆ. ಮೈಸೂರು ನಗರದಲ್ಲಿ ಅರಮನೆಗಳು ಸೇರಿದಂತೆ ನೂರಾರು ಪಾರಂಪರಿಕ ಕಟ್ಟಡಗಳು, ಮ್ಯೂಸಿಯಂಗಳು, ಮೃಗಾಲಯ, ಸುಂದರ ಕೆರೆಗಳು, ನಗರಕ್ಕೆ ಕಳಸವಿಟ್ಟಂತಿರುವ ಚಾಮುಂಡಿಬೆಟ್ಟ ಎಲ್ಲವೂ ದೂರದಿಂದ ಬರುವ ಪ್ರವಾಸಿಗರಿಗೆ ತನ್ನದೇ ಆದ ಮಹತ್ವವನ್ನು ಸಾರುವ ಮೂಲಕ ಆಕರ್ಷಿಸುತ್ತದೆ.

ಮೈಸೂರಿನಲ್ಲಿ ಅರಮನೆ, ಮೃಗಾಲಯ ಮಾತ್ರವಲ್ಲದೇ 24ಕ್ಕೂ ಹೆಚ್ಚು ಪ್ರವಾಸಿ ತಾಣಗಳಿವೆ. ಇವುಗಳನ್ನು ಜಗತ್ತಿಗೆ ತೋರಿಸುವುದು, ಮೈಸೂರು ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಎಂಬುದನ್ನು ತಿಳಿಸುವುದು, ಇದರ ಜೊತೆಗೆ ನಗರ ಮಾತ್ರವಲ್ಲದೆ, ಜಿಲ್ಲೆಯಾದ್ಯಂತ ಪಾರಂಪರಿಕ ಮತ್ತು ಪುರಾಣ ಪ್ರಸಿದ್ಧ ತಾಣಗಳಾದ ತಲಕಾಡಿನ ಸೋಮನಾಥಪುರ, ನಂಜನಗೂಡಿನ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇಗುಲ, ಕೆ.ಆರ್,ನಗರದ ಅರ್ಕೇಶ್ವರ ದೇವಸ್ಥಾನ ಸೇರಿದಂತೆ ಹಲವಾರು ತಾಣಗಳಿದ್ದು, ಇವುಗಳೆಲ್ಲವನ್ನು ಪ್ರವಾಸಿಗರಿಗೆ ಪರಿಚಯಿಸುವ ಸಲುವಾಗಿ ಬ್ರ್ಯಾಂಡ್ ಮೈಸೂರ್‌ಗೆ ಆದ್ಯತೆ ನೀಡಲಾಗುತ್ತಿದೆ.
ಬ್ರ್ಯಾಂಡ್ ಮೈಸೂರು ಲೋಗೋ ಹೇಗಿದೆ..?
ಈಗಾಗಲೇ ಬ್ರ್ಯಾಂಡ್ ಮೈಸೂರ್‌ಅನ್ನು ಜನಪ್ರಿಯಗೊಳಿಸಿ ದೇಶ ವಿದೇಶದ ಪ್ರವಾಸಿಗರನ್ನು ಮೈಸೂರಿಗೆ ಸೆಳೆಯುವುದರ ಜತೆಗೆ ಪ್ರವಾಸೋದ್ಯಮದ ಅಭಿವೃದ್ಧಿಗೆ ದಿಟ್ಟ ಹೆಜ್ಜೆ ಇಡಲಾಗಿದೆ. ಈ ಸಂಬಂಧ ಬ್ರ್ಯಾಂಡ್ ಮೈಸೂರಿಗೆ ವಿಶೇಷ ಲೋಗೊವನ್ನು ವಿಶಿಷ್ಟ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಈ ಲೋಗೋ ಹೇಗಿದೆ ಎಂದರೆ, ಚಿನ್ನದ ಅಂಬಾರಿ ಹೊತ್ತ ಎರಡು ಆನೆಗಳಿದ್ದು, ಅವುಗಳ ಮೇಲೆ ಮೈಸೂರು ರೇಷ್ಮೆ ವಸ್ತ್ರವನ್ನು ಹಾಕಲಾಗಿದೆ. ಆನೆಗಳ ನಡುವೆ ರಾಜವಂಶದ ಲಾಂಛನವಾದ ಗಂಡಭೇರುಂಡ ಇದೆ. ಮೈಸೂರು ವೀಳ್ಯೆದೆಲೆ ಹಾಗೂ ಮೈಸೂರು ಮಲ್ಲಿಗೆಯನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.
ಇನ್ನು ಈ ಲೋಗೋ ವಿನ್ಯಾಸ ಮಾಡಿದ್ದು ಹೇಗೆ ಎನ್ನುವುದನ್ನು ನೋಡಿದ್ದೇ ಆದರೆ ಪ್ರವಾಸೋದ್ಯಮ ಇಲಾಖೆ ಸೆಪ್ಟೆಂಬರ್ ತಿಂಗಳಿನಲ್ಲಿ ಆನ್‌ಲೈನ್‌ನಲ್ಲಿ ಬ್ರ್ಯಾಂಡಿಂಗ್ ಮೈಸೂರು ಲೋಗೋ ವಿನ್ಯಾಸ ರಚನೆ ಸ್ಪರ್ಧೆ ಆಯೋಜಿಸಿತ್ತು. 150ಕ್ಕೂ ಹೆಚ್ಚು ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಅಂತಿಮ ಸುತ್ತಿಗೆ 20 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಬಂದ ಎಲ್ಲ ಲೋಗೋಗಳನ್ನು ಆಧಾರವಾಗಿಟ್ಟುಕೊಂಡು ಸ್ಥಳೀಯ ಕಲಾವಿದರೊಬ್ಬರು ಅಂತಿಮ ಲೋಗೋ ವಿನ್ಯಾಸ ಮಾಡಿರುವುದು ವಿಶೇಷವಾಗಿದೆ.

ಲೋಗೋ ರಚಿಸಿ ವಿಜೇತರಾದವರು
ಪ್ರವಾಸೋದ್ಯಮ ಇಲಾಖೆಯು ಲೋಗೋ ವಿನ್ಯಾಸ ರಚನೆ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾದ ವಿಜೇತರಿಗೆ ಪ್ರಥಮ ಬಹುಮಾನವಾಗಿ 20 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ತೃತೀಯ ಬಹುಮಾನವಾಗಿ 5 ಸಾವಿರ ನಗದು ನೀಡಲಾಗಿದೆ. ರಾಘವೇಂದ್ರ ಎಲ್.ಎ. (ಪ್ರ), ಬಾಲಸ್ವಾಮಿ ಎಂ. (ದ್ವಿ), ರಿದ್ವ ಶೈಲಾ ರೈ (ತೃ) ಬಹುಮಾನ ಪಡೆದಿದ್ದರೆ, ಮ್ಯಾಸ್‌ಕಾಟ್ (ಒಂದು ಸುಂದರ ಶುಭಕಾರಿ) ಸ್ಪರ್ಧೆಯಲ್ಲಿ ಅದಿತಿ ಪಂಡಿತ್ (ಪ್ರ), ಬಿ.ಪ್ರಣೀತ್ ಆಶ್‌ವಿನಯ್ (ದ್ವಿ), ಸಯಾನ್ ಪಂಡಿತ್ (ತೃ). ವಿಭಿನ್ನವಾದ ಸ್ಮರಣೆಗಳು ಸ್ಪರ್ಧೆಯಲ್ಲಿ ಬಿ.ಪ್ರಣೀತ್ ಆಶ್‌ವಿನಯ್ (ಪ್ರ), ಪ್ರತಿಭಾ ಟಿ. (ದ್ವಿ), ಎಲ್.ಪ್ರೀತಮ್ ಭಾರಧ್ವಾಜ್ (ತೃ). ಬ್ಲಾಗ್‌ಪೋಸ್ಟ್ ಸ್ಪರ್ಧೆಯಲ್ಲಿ ಸಿಂಧು ಎಸ್.ಶಾಸ್ತ್ರಿ (ಪ್ರ), ಮೇಘನಾ ಭಾಸ್ಕರ್ (ದ್ವಿ), ಎಸ್.ಎಂ.ಮೀನಾಕ್ಷಿ (ತೃ.) ಬಹುಮಾನ ಪಡೆದಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಬ್ರ್ಯಾಂಡ್ ಮೈಸೂರ್‌ಗೆ ಲೋಗೋ ತಯಾರಿಯಾಗಿದ್ದು, ಮುಂದಿನ ಕಾರ್ಯಕ್ರಮಗಳು ಹೇಗಿರಲಿವೆ..? ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ..? ಪ್ರವಾಸಿಗರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಇದು ಯಶಸ್ವಿಯಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.












Click it and Unblock the Notifications