PM Modi Road Show: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರೋಡ್ ಶೋ ನಡೆಸಿ ಪ್ರಧಾನಿ ಮೋದಿ ಲಕ ಲಕ ಮಿಂಚಿದ್ದು ಹೀಗೆ
ಮೈಸೂರು, ಏಪ್ರಿಲ್, 30: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಮೈಸೂರಿನಲ್ಲಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ಮಾಡಿದರು. ಅಲ್ಲದೆ ಮಳೆ ಆತಂಕದ ನಡುವೆಯೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಯಶಸ್ವಿಯಾಗಿ ನಡೆಯಿತು.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ನಗರದಲ್ಲಿ ಭಾನುವಾರ ಸಂಜೆ 6:30ಕ್ಕೆ ನಾಲ್ಕು ಕಿಲೋ ಮೀಟರ್ ರೋಡ್ ಶೋ ನಡೆಸಿದರು. ಈ ವೇಳೆ 60 ಸಾವಿರಕ್ಕೂ ಹೆಚ್ಚು ಮಂದಿ ಮೋದಿ ಅವರನ್ನು ಹತ್ತಿರದಿಂದ ಕಣ್ತುಂಬಿಕೊಂಡರು. ಮೋದಿ ಅವರ ತೆರೆದ ವಾಹನದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಈಶ್ವರಪ್ಪ, ಎಸ್.ಎ.ರಾಮದಾಸ್ ಇದ್ದರು.

ಮೈಸೂರು ನಗರದ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹ ರಾಜ ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆಯಾದ ರಾಜ ಮಾರ್ಗದಲ್ಲಿ ಮೋದಿ ಅವರ ರೋಡ್ ಶೋ ನಡೆಯಿತು. ಮೆರವಣಿಗೆಯುದ್ದಕ್ಕೂ ಸಾಂಪ್ರಾಯಿಕ ಧಿರಿಸು ಧರಿಸಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಜೊತೆಗೆ ಕಲಾ ತಂಡಗಳ ಪ್ರದರ್ಶನವೂ ಕೂಡ ಆಯಾ ಕಟ್ಟಿನ ಸ್ಥಳಗಳಲ್ಲಿ ಜರುಗಿತು.
ಪ್ರಧಾನಿ ರೋಡ್ ಶೋ ವೇಳೆ ಸುಮಾರು 150 ಬಿಜೆಪಿ ಕಾರ್ಯಕರ್ತರು ಮೈಸೂರು ಪೇಟ, ಕೇಸರಿ ರುಮಾಲು, ಶಲ್ಯ, ತೋಪಿ ಧರಿಸಿ ಗಮನಸೆಳೆದರು. ನಂತರ ಅವರ ಆಧಾರ್ ಕಾರ್ಡ್ ಪರಿಶೀಲಿಸಿ, ಲೋಹದ ಯಂತ್ರದಿಂದ ತಪಾಸಣೆ ನಡೆಸಿ ಒಳಗೆ ಬಿಡಲಾಯಿತು. ಇವರು ಮೋದಿ ವಾಹನದಿಂದ 100 ಮೀಟರ್ ಅಂತರದಿಂದ ಹೆಜ್ಜೆ ಹಾಕಿ ಗಮನ ಸೆಳೆದರು.
ಎಲ್ಲೆಲ್ಲೂ ನಾದಸ್ವರದ ವೈಭವ
ಅಲ್ಲದೆ ಸುಮಾರು ನೂರು ಜನ ನಾದಸ್ವರ ಕಲಾವಿದರು ಹಾಗೂ ಮಹಿಳೆಯರಿಂದ ಮೋದಿಯವರಿಗೆ ಪೂರ್ಣ ಕುಂಭ ಸ್ವಾಗತ ಕೋರಿದರು. ರೂಪಶ್ರೀ ಮಧುಸೂದನ್ ಅವರು ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಮಾಡಿರುವ ಮೋದಿ ಕುರಿತ ಗೀತೆಗೆ ವಿದುಷಿ ಪಿ.ರಮಾ ಅವರು ಭರತನಾಟ್ಯ ಪ್ರದರ್ಶಿಸಿದರು.
ಮೈಸೂರಿನ ಭೌಗೋಳಿಕವಾಗಿ ಗುರುತಿಸುವ ವಸ್ತುಗಳಾದ ಮೈಸೂರು ವಿಲೆದೆಲೆ, ಮೈಸೂರು ಪಾಕ್, ಗಂಧದ ಕಡ್ಡಿ, ಮೈಸೂರು ರೇಷ್ಮೆ, ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಪೇಟ, ಮೈಸೂರು ಅರಮನೆ ಕಲಾಕೃತಿ ಹಾಗೂ ರೇಷ್ಮೆಪಂಜೆ, ವಲ್ಲಿ ಸೇರಿದಂತೆ ಸುಮಾರು18 ವಸ್ತುಗಳನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಲಾಯಿತು.
ಬಿಗಿ ಪೊಲೀಸ್ ಭದ್ರತೆ
ಪ್ರಧಾನಿ ಮೋದಿ ಅವರು ರೋಡ್ ಶೋ ಆರಂಭವಾಗುವ ಗನ್‌ಹೌಸ್ ಜಾಗದಲ್ಲಿ ಸಿಐಎಸ್‌ಎಫ್, ಮೈಸೂರು ನಗರ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಅಲ್ಲದೆ ಕಾರ್ಯಕರ್ತರನ್ನು ತೀವ್ರ ತಪಾಸಣೆ ನಡೆಸಲಾಯಿತು.
ರಾಮಾನುಜ ರಸ್ತೆ, ಕುವೆಂಪು ಉದ್ಯಾನ, ಅರಮನೆ ದಕ್ಷಿಣ ದ್ವಾರ, ಕಾಡಾ ಕಚೇರಿ ಆವರಣ, ಸಂಸ್ಕೃತಿ ಪಾಢಶಾಲೆ, ಚಾಮರಾಜ ಡಬ್ಬಲ್ ರೋಡ್ ಎಲ್ಲಾ ಕಡೆ ಜನರು ಮೋದಿ ಅವರನ್ನು ನೋಡಲು ಕಿಕ್ಕಿರಿದು ಸೇರಿದ್ದರು. ಮಹಿಳೆಯರು ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಕರೆತಂದಿದ್ದರು. ಆಟೋ, ವ್ಯಾನ್, ಕ್ಯಾಂಟರ್ ನಿಂದಲೂ ಜನ ಬಂದಿದ್ದರು. ಗನ್ ಹೌಸ್ ವೃತ್ತದಲ್ಲಿ ಮೋದಿ ಅವರ ಅಪರೂಪದ ಪೋಟೊಗಳನ್ನು ವೃತ್ತದ ಸುತ್ತ ಜೋಡಿಸಿ ಪ್ಲೆಕ್ಸ್ ಮಾದರಿಯಲ್ಲಿ ಅಳವಡಿಸಿದ್ದರು. ಅಲ್ಲದೆ ಸುತ್ತಲೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದವು.
ವೃತ್ತದ ಬಳಿ ತಾತ್ಕಾಲಿಕ ಗೋಪುರ ನಿರ್ಮಿಸಿ ಅಲ್ಲಿ ಮೋದಿ ಅವರ ಭಾವಚಿತ್ರವನ್ನು ನಿಲ್ಲಿಸಿದರು. ಇನ್ನು ಮಾರ್ಗದ ಉದ್ದಕ್ಕೂ ಅಳವಡಿಸಿದ್ದ ಬ್ಯಾರಿಕೇಡ್‌ಗೆ ಕೇಸರಿ ಬಟ್ಟೆ ಅಲಂಕರಿಸಿದ್ದರು. ಮೋದಿ ಅವರನ್ನು ಸ್ವಾಗತಿಸುವ ಕಮಾನು ಕೂಡ ಅಲ್ಲಲ್ಲಿ ಅಂಟಿಸಲಾಗಿತ್ತು. ಮೋದಿ ಅವರ ತಾಯಿ ಹೀರಾಬಾಯಿ ಜೊತೆ ಇರುವ ಫೋಟೋ ಸೇರಿದಂತೆ ಅಪರೂಪದ ಚಿತ್ರಗಳು ರೋಡ್ ಶೋನಲ್ಲಿ ಗಮನ ಸೆಳೆದವು.












Click it and Unblock the Notifications