ಚುನಾವಣೆಗೆ ಮತ ಹಾಕಿದ ಮೇಲೆ ಬೆರಳ ಮೇಲೆ ಉಳಿಯುವ ಇಂಕ್ ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು, ಏಪ್ರಿಲ್. 04: ದೇಶದಲ್ಲಿ ಎಲ್ಲಿ ಚುನಾವಣೆ ಬಂತೆಂದರರೂ ಸಾಂಸ್ಕೃತಿಕ ರಾಜಧಾನಿ ಮೈಸೂರಿನ 75 ವರ್ಷಗಳಷ್ಟು ಹಳೆಯದಾದ ಕಾರ್ಖಾನೆಯೊಂದು ಫುಲ್ ಬ್ಯುಸಿಯಾಗಿ ಬಿಡುತ್ತದೆ. ಯಾಕೆ ಗೊತ್ತಾ, ಚುನಾವಣೆಯಲ್ಲಿ ಈ ಕಾರ್ಖಾನೆಯ ಉತ್ಪನ್ನದ ಬಳಕೆ ಅನಿವಾರ್ಯ. ಈ ಕಾರಣದಿಂದಲ್ಲೇ ಇಲ್ಲಿನ ಕಾರ್ಮಿಕರು ಹೆಚ್ಚು ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.
ಏನಿದು ಅಂತ ಯೋಚ್ನೆ ಮಾಡ್ತಿದ್ದಿರಾ...? ದೇಶದ ಪ್ರತಿ ಚುನಾವಣೆಯೊಂದಿಗೆ ಈ ಮೈಸೂರು ಸಂಪರ್ಕವು ಸುಮಾರು ಆರು ದಶಕಗಳ ಹಿಂದಿನದು. ಏಕೆಂದರೆ ಮತ ಚಲಾಯಿಸುವ ಮತದಾರ ಪ್ರಭುಗಳ ಬೆರಳುಗಳ ಮೇಲೆ ಅಳಿಸಲಾಗದ ಶಾಯಿಯನ್ನು ಕರ್ನಾಟಕ ಸರ್ಕಾರದ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ (MPVL) ನಲ್ಲಿ ಮಾತ್ರ ತಯಾರಿಸಲಾಗುತ್ತದೆ.

ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಎಂಪಿವಿಎಲ್ ಕಾರ್ಖಾನೆ ಸುಮಾರು 1.3 ಲಕ್ಷ ಶಾಯಿ ಬಾಟಲಿಗಳನ್ನು ಪೂರೈಸಿದೆ. ಫೆಬ್ರವರಿಯಲ್ಲಿ ಚುನಾವಣಾ ಆಯೋಗದ ಆದೇಶವನ್ನು ಪಡೆದ ನಂತರ, 100 ಕ್ಕೂ ಹೆಚ್ಚು ಕಾರ್ಮಿಕರು ಇಂಕ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಹದಿನೈದು ದಿನಗಳ ಹಿಂದೆ ಈ ಶಾಯಿಗಳನ್ನು ಕಳುಹಿಸಲಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
*ಆದೇಶಗಳ ಮೇಲೆ ಶಾಯಿ ತಯಾರಿಕೆ*
ಈ ಶಾಯಿಯನ್ನು ಯಾವಾಗಲೂ ಆದೇಶಗಳಿಗೆ ಅನುಗುಣವಾಗಿ ತಯಾರಿಸಲಾಗುತ್ತದೆ. ಇಲ್ಲಿ ತಯಾರಿಸಲಾಗುವ ಪ್ರತಿ ಬಾಟಲಿಯು 10 ಮಿಲಿ ಶಾಯಿಯನ್ನು ಹೊಂದಿರುತ್ತದೆ. 10 ಮಿಲಿ ಸೀಸೆಯಿಂದ ಚುನಾವಣೆಗಳಲ್ಲಿ ಸುಮಾರು 700 ಮತದಾರರ ಬೆರಳುಗಳಿಗೆ ಇಂಕ್ ಹಾಕಬಹುದು ಎಂದು ಕಾರ್ಖಾನೆಯ ಮೂಲಗಳು ತಿಳಿಸಿವೆ.
ನಿಮ್ಮ ಬೆರಳುಗಳ ಮೇಲೆ ಅಳಿಸದೆ ಇರುವಂತಹ ಶಾಯಿಯಲ್ಲಿ "ವಿಶೇಷ ರಾಸಾಯನಿಕ ಬಳಕೆ ಮಾಡಲಾಗುತ್ತದೆ. ಇದು ದೀರ್ಘಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅಳಿಸಲಾಗದ ಶಾಯಿಯನ್ನು ತಯಾರಿಸುವ ದೇಶದ ಪಿಎಸ್‌ಯುಗಳಲ್ಲಿ ಮೈಸೂರಿನ ಕಾರ್ಖಾನೆ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಎಂಪಿವಿಎಲ್ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಶಾಯಿಯನ್ನು ಪೂರೈಸುತ್ತಿದೆ.

ಎಂಪಿವಿಎಲ್ ಕಾರ್ಖಾನೆಯಲ್ಲಿ ಶಾಯಿ ಉತ್ಪಾದನೆಯು 1962 ರಲ್ಲಿ ನವದೆಹಲಿಯ ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿಯಿಂದ ರೂಪಿಸಲಾದ ವಿಶೇಷ ರಾಸಾಯನಿಕ ಸಂಯೋಜನೆಯ ಆಧಾರದ ಮೇಲೆ ಪ್ರಾರಂಭವಾಯಿತು. ಇಲ್ಲಿನ ಬನ್ನಿಮಂಟಪ ವಿಸ್ತರಣೆಯಲ್ಲಿರುವ 7 ಎಕರೆ ಕ್ಯಾಂಪಸ್‌ನಲ್ಲಿರುವ ಕಾರ್ಖಾನೆಯು 1962 ರಿಂದ ಚುನಾವಣೆಗಳಿಗೆ ಶಾಯಿ ಬೇಡಿಕೆಯನ್ನು ಪೂರೈಸುವ ಏಕೈಕ ಪೂರೈಕೆದಾರ.
ಮೈಸೂರು ಲ್ಯಾಕ್ ಫ್ಯಾಕ್ಟರಿ ಎಂದು 1937 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದರು. ಈ ಕಂಪನಿಯನ್ನು 1947 ರಲ್ಲಿ ಮೈಸೂರು ಲ್ಯಾಕ್ ಮತ್ತು ಪೇಂಟ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. 1989 ರಲ್ಲಿ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. ನಂತರ ಬಣ್ಣಗಳ ಜೊತೆಗೆ ವಾರ್ನಿಷ್ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ.
*ಇತರ ದೇಶಗಳಿಗೂ ಶಾಯಿ ಪೂರೈಕೆ*
ಎಂಪಿವಿಎಲ್ ಇತರ 25 ರಿಂದ 30 ದೇಶಗಳಿಂದಲೂ ಶಾಯಿ ರಫ್ತಿನ ಆದೇಶಗಳನ್ನು ಪಡೆಯುತ್ತದೆ. 2021ರಲ್ಲಿ ಕಂಪನಿಯು 8.14 ಕೋಟಿ ರೂಪಾಯಿ ಮೌಲ್ಯದ ಶಾಯಿಯನ್ನು ರಫ್ತು ಮಾಡಿದೆ. ಸಾಗರೋತ್ತರ ಚುನಾವಣೆಗಾಗಿ ಶಾಯಿಯನ್ನು ಮೊದಲ ರಫ್ತು ಮಾಡಿದ್ದು 1978-79 ರಲ್ಲಿ. ಎಂಪಿವಿಎಲ್ ವಿದೇಶಗಳಲ್ಲಿ ಚುನಾವಣೆಗಳಿಗೆ ಶಾಯಿಯನ್ನು ಪೂರೈಸಲು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನೋಂದಾಯಿಸಿ ಕೊಂಡಿದೆ.












Click it and Unblock the Notifications