ಹಾಸ್ಟೆಲ್ ನಲ್ಲಿ ಊಟ, ವಸತಿ ಓಕೆ, ನೀರಿನ ವ್ಯವಸ್ಥೆ?
ಮೈಸೂರು, ಜೂ.25 : ಹಾಸ್ಟೆಲ್ ನಲ್ಲಿ ಊಟ ವಸತಿ ವ್ಯವಸ್ಥೆ ಓಕೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಸ್ವಲ್ಪ ಅವ್ಯವವಸ್ಥೆ ಏಕೆ? ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ ಹುನಗುಂದ ಅವರು ಮೈಸೂರು ನಗರದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಮಂಗಳವಾರ ಮೈಸೂರಿನ ವಿ.ವಿ.ಮೊಹಲ್ಲಾದ ಸಮಾಜ ಕಲ್ಯಾಣ ಇಲಾಖೆ ಬಾಲಕಿಯರ ಹಾಸ್ಟೆಲ್ ಗಳಿಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಅಡುಗೆ ಮನೆ, ಉಗ್ರಾಣ, ವಾಸದ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಉಗ್ರಾಣದಲ್ಲಿ ಲಭ್ಯವಿದ್ದ ತೊಗರಿಬೇಳೆ, ಹೆಸರುಬೇಳೆ, ಕಡ್ಲೆ, ಸೂರ್ಯಕಾಂತಿ ಮತ್ತು ಇತರೆ ದಿನಸಿ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯಲಾಗುತ್ತಿದ್ದು, ಕೆಲವು ವಸ್ತುಗಳನ್ನು ಟೆಂಡರ್ ಮೂಲಕ ಪಡೆಯಲಾಗುತ್ತಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಸರಸ್ವತಿ ವಿವರಣೆ ನೀಡಿದರು.
ಇಲಾಖೆ ವಸತಿ ನಿಲಯಗಳಿಗೆ ಯಾರೇ ಪ್ರವೇಶ ಕೋರಿ ಬಂದರೂ ಅವಕಾಶ ನಿರಾಕರಿಸಬಾರದು ಎಂದು ಸಮಾಜ ಕಲ್ಯಾಣ ಸಚಿವರು ಆದೇಶ ನೀಡಿದ್ದಾರೆ. ಆದ್ದರಿಂದ ಅರ್ಹರಾದ ಯಾರಿಗೂ ಅವಕಾಶ ನಿರಾಕರಿಸುತ್ತಿಲ್ಲ. ಸ್ಥಳಾಭಾವ ಉಂಟಾಗಿರುವುದರಿಂದ, ಬಾಡಿಗೆ ಕಟ್ಟಡಗಳನ್ನು ಪಡೆದು ಹೆಚ್ಚುವರಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿಗಳು ವಿವರಿಸಿದರು.
ಸ್ವಲ್ಟ ಸಮಸ್ಯೆ ಇದೆ : ಹಾಸ್ಟೆಲ್ ನಲ್ಲಿನ ಶೌಚಾಲಯ ವ್ಯವಸ್ಥೆಯಲ್ಲಿ, ಕುಡಿಯುವ ನೀರು ಪೂರೈಕೆಯಲ್ಲಿ ಸ್ವಲ್ಪ ಸಮಸ್ಯೆ ಇದೆ. 2.39 ಕೋಟಿ ರೂ ವೆಚ್ಚದಲ್ಲಿ ಹಲವಾರು ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಶುದ್ಧ ಕುಡಿಯುವ ನೀರಿಗಾಗಿ ಫಿಲ್ಟರ್ ಗಳನ್ನು ಅಳವಡಿಸಲಾಗುತ್ತಿದ್ದು ಈ ಕಾರ್ಯ ಸಹ ಇನ್ನು 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸ್ಪೋಕನ್ ಇಂಗ್ಲಿಷ್ ಕ್ಲಾಸ್ : ಹಾಸ್ಟೆಲ್ ನಲ್ಲಿ ಗ್ರಂಥಾಲಯದ ವ್ಯವಸ್ಥೆ ಅಗತ್ಯವಿದೆ ಎಂದು ವಿದ್ಯಾರ್ಥಿಗಳು ಹುನಗುಂದ ಅವರಿಗೆ ಬೇಡಿಕೆ ಸಲ್ಲಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ ಅವರು, ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡಲು ಸಹ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದರು.
ಹಾಸ್ಟೆಲ್ ಪಕ್ಕದಲ್ಲಿರುವ ಮೈಸೂರು ಮಹಾನಗರ ಪಾಲಿಕೆಯ ವಿದ್ಯಾರ್ಥಿನಿಲಕ್ಕೆ ಭೇಟಿ ನೀಡಿದ ಹುನಗುಂದ ಅವರು, ಅಲ್ಲಿ ಪರಿಶೀಲನೆ ನಡೆಸಿದರು. ಹಿಂದೆ ಪಾಲಿಕೆ ಹಾಸ್ಟೆಲ್ ನಲ್ಲಿ 600 ವಿದ್ಯಾರ್ಥಿಗಳು ಇದ್ದರು. ಹೆಚ್ಚುವರಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದ್ದು 150 ವಿದ್ಯಾರ್ಥಿಗಳು ಮಾತ್ರ ಇರುವುದರಿಂದ ಅಗತ್ಯ ವ್ಯವಸ್ಥೆ ಇದೆ ಅಧಿಕಾರಿಗಳು ಮಾಹಿತಿ ನೀಡಿದರು.












Click it and Unblock the Notifications