Mysuru : ಇದ್ದಕ್ಕಿದ್ದಂತೆ ಮೈಸೂರಿನಲ್ಲಿ ಹೆಚ್ಚಾಯ್ತು ಮನೆ ಬಾಡಿಗೆ: ಕಾರಣ ಇಲ್ಲಿದೆ
ಅರಮನೆ ನಗರಿ, ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಈಗ ಇದ್ದಕ್ಕಿದ್ದಂತೆ ಮನೆ ಬಾಡಿಗೆ ಹೆಚ್ಚಳವಾಗಿದ್ದು, ಜನರ ಜೇಬಿಗೆ ಕತ್ತರಿ ಬೀಳಲಿದೆ. ಅದ್ಯಾಕಪ್ಪ ಇದ್ದಕ್ಕಿದ್ದಂತೆ ಮನೆ ಬಾಡಿಗೆ ಜಾಸ್ತಿಯಾಗಿದೆ ಅಂದ್ಕೊಂಡ್ರಾ? ಅದಕ್ಕೆ ಉತ್ತರ ಮೈಸೂರಿನಲ್ಲಿರುವ ಶಾಲೆಗಳು. ಹೌದು, ಮೈಸೂರಿನಲ್ಲಿ ದಿಢೀರ್ ಎಂದು ಮನೆ ಬಾಡಿಗೆ ಹೆಚ್ಚಾಗೋಕೆ ಶಾಲೆಗಳು ಕಾರಣವಾಗಿವೆ.
ಇವಾಗ ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳನ್ನ ಒಳ್ಳೆ ಶಾಲೆಗೆ ಸೇರಿಸ್ಬೇಕು ಅನ್ನೋ ಕನಸಿರುತ್ತದೆ. ಲಕ್ಷ ಲಕ್ಷ ಶುಲ್ಕ ಕಟ್ಟಿ ಮಕ್ಕಳನ್ನು ಶಾಲೆಗೆ ಸೇರಿಸೋ ಪೋಷಕರಿಗೆ, ಶಾಲೆಗಳ ಬಳಿಯೇ ಮನೆಯಿದ್ದರೆ ಅವರ ಓದಿಗೂ ಅನುಕೂಲ ಎನ್ನಿಸುವುದು ಸಹಜ, ಇದರಿಂದ ಮಕ್ಕಳ ಓಡಾಟದ ಖರ್ಚು ತಪ್ಪುತ್ತೆ, ಸಮಯಾನು ಉಳಿಯುತ್ತೆ ಅನ್ನೊ ಲೆಕ್ಕಾಚಾರ ಪೋಷಕರದ್ದು.

ಇದೇ ಕಾರಣಕ್ಕೆ ಈಗ ಮೈಸೂರಿನ ಪ್ರತಿಷ್ಠಿತ ಶಾಲೆಗಳಿನ ಸುತ್ತ ಮುತ್ತಲಿನ ಭಾಗಗಳಲ್ಲಿ ಮನೆ ಬಾಡಿಗೆ ಗಗನಕ್ಕೇರಿದೆ. ನಗರ ಪ್ರದೇಶದಲ್ಲಿರುವ ಮನೆಗಳಿಗಿಂತ ಹೊರ ವಲಯದಲ್ಲಿ ಶಾಲೆಗಳ ಸಮೀಪವಿರುವ ಮನೆಗಳ ಬಾಡಿಗೆಯೇ ಹೆಚ್ಚಾಗಿದೆಯಂತೆ. ಶಾಲೆಗಳಿಗೆ ಫಿಸ್ ಕಟ್ಟೋದು ಒಂದು ಕಡೆಯಾದ್ರೆ ಅವರನ್ನು ಕರೆದುಕೊಂಡು ಹೋಗುವ ವಾಹನಗಳಿಗೂ ಹೆಚ್ಚಿನ ಹಣ ನೀಡಬೇಕಾಗುತ್ತದೆ, ಪೋಷಕರು ವೆಚ್ಚವನ್ನು ಕಡಿಮೆ ಮಾಡಲು ಮನೆ ಬದಲಾಯಿಸಲು ಯೋಚಿಸುತ್ತಿದ್ದಾರೆ.
ಸಿಬಿಎಸ್‌ಇ/ಐಸಿಎಸ್‌ಇ ಶಾಲೆಗಳ ಮೇ ಮೂರನೇ ವಾರದಿಂದ ಆರಂಭವಾಗಲಿವೆ. ಏಪ್ರಿಲ್ ತಿಂಗಳ ಕೊನೆ ಮತ್ತು ಮೇ ಮೊದಲನೇ ವಾರವೇ ಬಹುತೇಕ ಪೋಷಕರು ಮನೆಗಳನ್ನು ಬದಲಾಯಿಸುವ ಸಿದ್ಧತೆಯಲ್ಲಿದ್ದಾರೆ. ಹೊಸದಾಗಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರು ಕೂಡ ಶಾಲೆಯ ಸಮೀಪವೇ ಮನೆಗಳನ್ನು ಮಾಡಲು ಉತ್ಸಾಹ ತೋರಿದ್ದಾರೆ.
ನಗರದ ಹೊರವಲಯದಲ್ಲಿರುವ ಶಾಲೆಗಳ ಸಮೀಪದಲ್ಲಿರುವ ಮನೆಗಳ ಬಾಡಿಗೆ ಶೇಕಡಾ 10 ರಿಂದ 20 ರಷ್ಟು ಹೆಚ್ಚಾಗಿದೆ. ಶಾಲೆಯಿಂದ 3-4 ಕಿಲೋ ಮೀಟರ್ ದೂರದಲ್ಲಿ ಮನೆ ಬೇಕೆಂದೆರೂ ಎರಡು ಬೆಡ್ ರೂಂ ಮನೆಗೆ 11 ಸಾವಿರದಿಂದ 13 ಸಾವಿರದವರೆಗೆ ಬಾಡಿಗೆ ನೀಡಲು ಸಿದ್ದವಿರಬೇಕು. ಕಳೆದ ವರ್ಷ ಇಲ್ಲಿ ಇದೇ ಮನೆಗಳ ಬಾಡಿಗೆ 10 ಸಾವಿರದ ಆಸುಪಾಸಿನಲ್ಲಿತ್ತು. ಇದೀಗ ಶಾಲೆಗಳು ಆರಂಭವಾಗಲು ಒಂದು ತಿಂಗಳು ಸಮಯವಿದ್ದು ಪೋಷಕರಿಗೆ ಈಗಿನಿಂದಲೇ ಮನೆ ಹುಡುಕುವ ತಲೆನೋವು ಶುರುವಾಗಿದೆ.
ಶಾಲೆಗಳ ಕಾರಣದಿಂದ ಸುತ್ತಮುತ್ತಲಿನ ಮನೆಗಳಿಗೆ ದಿಢೀರ್ ಎಂದು ಬೇಡಿಕೆ ಹೆಚ್ಚಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಮನೆಗಳ ಮಾಲೀಕರು ಬಾಡಿಗೆಯನ್ನು ಹೆಚ್ಚಾಗಿ ಕೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಬೇಕಾದ್ರು ಮನೆ ಬಾಡಿಗೆ ಕಟ್ಬೋದು ಮೈಸೂರಲ್ಲಿ ಮನೆ ಸಿಗೋದು ಕಷ್ಟ, ಬಾಡಿಗೆಯೂ ಹೆಚ್ಚು ಎನ್ನುತ್ತಾರೆ.











Click it and Unblock the Notifications