ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತ್ಯೇಕ ಹುಣಸೂರು ಜಿಲ್ಲೆ ಕೂಗಿಗೆ ರಾಜಕೀಯ ವೈಷಮ್ಯ ಮರೆತು ಒಂದಾದ ವಿಶ್ವನಾಥ್- ಮಂಜುನಾಥ್

|
Google Oneindia Kannada News

ಮೈಸೂರು, ಆಗಸ್ಟ್ 21: ಹುಣಸೂರು ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಹುಣಸೂರು ಪ್ರತ್ಯೇಕ ಜಿಲ್ಲೆ ಕೂಗು ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಇದಕ್ಕಾಗಿ ರಾಜಕೀಯದಲ್ಲಿ ವೈರಿಗಳಾಗಿ ಗುರುತಿಸಿಕೊಂಡಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹಾಗೂ ಹುಣಸೂರು ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ಒಂದಾಗಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನದ ಬಳಿಕ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ವಿಶ್ವನಾಥ್, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹುಣಸೂರು ತಾಲ್ಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವಂತೆ ಒತ್ತಡ ಹೇರಿದ್ದರು. ಅಲ್ಲದೇ ಹುಣಸೂರು ಉಪ ಚುನಾವಣೆ ಸಂದರ್ಭದಲ್ಲೇ ಇದೇ ವಿಷಯವನ್ನು ವಿಶ್ವನಾಥ್ ಚುನಾವಣಾ ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡಿದ್ದರು. ಆದರೆ ಉಪ ಚುನಾವಣೆಯಲ್ಲಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಈ ವಿಚಾರದ ಕುರಿತು ಯಾವುದೇ ಚರ್ಚೆ ನಡೆದಿರಲಿಲ್ಲ.

 ಸಚಿವ ಎಸ್.ಟಿ. ಸೋಮಶೇಖರ್‌ಗೆ ಮನವಿ

ಸಚಿವ ಎಸ್.ಟಿ. ಸೋಮಶೇಖರ್‌ಗೆ ಮನವಿ

ಆದರೀಗ ಮತ್ತೊಮ್ಮೆ ಹುಣಸೂರು ಪ್ರತ್ಯೇಕ ಜಿಲ್ಲೆ ಕೂಗು ಕೇಳಿ ಬಂದಿದ್ದು, ಹುಣಸೂರು ತಾಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸುವ ಸಲುವಾಗಿ ಉಪ ಚುನಾವಣೆಯಲ್ಲಿ ರಾಜಕೀಯ ಎದುರಾಳಿಗಳಾಗಿದ್ದ ಎಂಎಲ್‌ಸಿ ಎಚ್. ವಿಶ್ವನಾಥ್ ಹಾಗೂ ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ಒಂದಾಗಿದ್ದಾರೆ. ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್‌ಗೆ ಮನವಿ ಸಲ್ಲಿಸಲು ಇಬ್ಬರು ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮೈಸೂರು ಜಿಲ್ಲೆಯ ಒತ್ತಡ ಕಡಿಮೆ ಮಾಡಲು ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು ಜಂಟಿಯಾಗಿ ಇಬ್ಬರು ನಾಯಕರು ಘೋಷಣೆ ಮಾಡಿದ್ದು, ಇದೇ ವಿಚಾರವನ್ನು ಮುಂದಿನ ಅಧಿವೇಶನದಲ್ಲೂ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.

 ಸಮ್ಮಿಶ್ರ ಸರ್ಕಾರದಲ್ಲೂ ಕೂಗು!

ಸಮ್ಮಿಶ್ರ ಸರ್ಕಾರದಲ್ಲೂ ಕೂಗು!

ಈ ಹಿಂದೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ಎಚ್. ವಿಶ್ವನಾಥ್ ಹುಣಸೂರು ಪ್ರತ್ಯೇಕ ಜಿಲ್ಲೆಗೆ ಧ್ವನಿ ಎತ್ತಿದರು. ಇದಕ್ಕೆ ಹಲವು ಪರ- ವಿರೋಧ ಕೇಳಿಬಂದಿತ್ತು. ಆದರೆ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಈ ವಿಚಾರ ನೆನೆಗುದಿಗೆ ಬಿದ್ದಿತ್ತು. ಆದರೆ ಕಾಂಗ್ರೆಸ್ ಶಾಸಕ ಮಂಜುನಾಥ್ ಕೂಡ ಹುಣಸೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕೆಂಬ ವಿಶ್ವನಾಥ್ ಒತ್ತಾಯಕ್ಕೆ ಪಕ್ಷಾತೀತವಾಗಿ ಸಾಥ್ ನೀಡಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ.

 ಅರಸು ಜನ್ಮದಿನದಂದೇ ಚರ್ಚೆ!

ಅರಸು ಜನ್ಮದಿನದಂದೇ ಚರ್ಚೆ!

ಕಳೆದ ಉಪ ಚುನಾವಣೆ ಸಂದರ್ಭದಲ್ಲಿ ಸದ್ದು ಮಾಡಿದ್ದ ಹುಣಸೂರು ಪ್ರತ್ಯೇಕ ಜಿಲ್ಲೆಯ ಒತ್ತಾಯ ಮತ್ತೊಮ್ಮೆ ಕೇಳಿ ಬಂದಿರುವುದು ಹೊಸದೊಂದು ರಾಜಕೀಯ ಸಂಚಲನ ಮೂಡಿಸಿದೆ. ಅದರಲ್ಲೂ ಶುಕ್ರವಾರ(ಆ.20) ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಜನ್ಮದಿನದಂದೇ ಈ ಕೂಗು ಕೇಳಿ ಬಂದಿದೆ. ಮೂಲತಃ ಮೈಸೂರಿನವರಾಗಿರುವ ದೇವರಾಜ ಅರಸು ಹುಟ್ಟೂರು ಹುಣಸೂರಿನ ಕಲ್ಲಹಳ್ಳಿ ಗ್ರಾಮ. ಹೀಗಾಗಿ ಅವರ ಜನ್ಮದಿನದಂದೇ ಪ್ರತ್ಯೇಕ ಹುಣಸೂರು ಜಿಲ್ಲೆ ಕೂಗು ಎದ್ದಿದ್ದು, ಇದು ಯಾವ ಹಂತಕ್ಕೆ ತಲುಪಲಿದೆ ಅನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

 ಸಿಎಂ ಗಮನಕ್ಕೆ ತಂದು ಚರ್ಚೆ

ಸಿಎಂ ಗಮನಕ್ಕೆ ತಂದು ಚರ್ಚೆ

ಹುಣಸೂರು ತಾಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, "ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ. ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಹುಣಸೂರು ತಾಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹಾಗೂ ಶಾಸಕ ಎಚ್.ಪಿ. ಮಂಜುನಾಥ್ ಪತ್ರದ ಮೂಲಕ ನನಗೆ ಮನವಿ ಸಲ್ಲಿಸಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸಲಾಗುವುದು. ಪ್ರತ್ಯೇಕ ಜಿಲ್ಲೆ ಕೇಳುವುದರಲ್ಲಿ ತಪ್ಪೇನಿಲ್ಲ, ಈ ಬಗ್ಗೆ ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ," ಎಂದಿದ್ದಾರೆ.

English summary
MLC H. Vishwanath and Hunsuru Congress MLA H.P. Manjunath has demanded a separate Hunsuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X